3 ಲಕ್ಷ ರೂ.ಗಳಿಗೂ ಹೆಚ್ಚು ಪತ್ತೆಯಾಗಿದ್ದರೆ ರಾಜಕೀಯ ನಿವೃತ್ತಿ: ಜಾರಕಿಹೊಳಿ ಸವಾಲು
‘ಮೋದಿ ಸುಳ್ಳು ಹೇಳಿಕೆ’ಗೆ ಆಕ್ಷೇಪ

ಬೆಳಗಾವಿ, ಜ. 28: ತಮ್ಮ ನಿವಾಸದಲ್ಲಿ 150 ಕೋಟಿ ರೂ.ಮೊತ್ತದ ಬೇನಾಮಿ ಆಸ್ತಿ ಪತ್ತೆಯಾಗಿದೆ ಎಂದು ಪ್ರಧಾನಿ ಮೋದಿ ಪಂಜಾಬ್ ಚುನಾವಣಾ ಪ್ರಚಾರದ ವೇಳೆ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ತನಗೆ ಅತೀವ ಬೇಸರ ಮೂಡಿಸಿದೆ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ಆಕ್ಷೇಪಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿಯ ವೇಳೆ 43 ಸಾವಿರ ರೂ.ನಗದು ಹಾಗೂ ತಮ್ಮ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ 2.50 ಲಕ್ಷ ರೂ.ನಗದು ಸೇರಿದಂತೆ 3 ಲಕ್ಷ ರೂ.ಗಳಷ್ಟು ಅಘೋಷಿತ ಮೊತ್ತ ಪತ್ತೆಯಾಗಿದೆ.
ತಮ್ಮ ನಿವಾಸದಲ್ಲಿ 3 ಲಕ್ಷಕ್ಕೂ ಹೆಚ್ಚು ಅಘೋಷಿತ ಮೊತ್ತ ಪತ್ತೆಯಾಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಾಬೀತುಪಡಿಸಿದರೆ ಕೂಡಲೇ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಮಾತ್ರವಲ್ಲ, ರಾಜಕೀಯ ಜೀವನದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ರಮೇಶ್ ಜಾರಕಿಹೊಳಿ, 150 ಕೋಟಿ ರೂ. ಬೇನಾಮಿ ಆಸ್ತಿ ಹೊಂದಿದ್ದಾರೆಂದು ಐಟಿ ಅಧಿಕಾರಿಗಳು ಸಂಪೂರ್ಣ ಸುಳ್ಳು ಮಾಹಿತಿ ನೀಡಿದ್ದಾರೆ. ಅದನ್ನೆ ಪ್ರಧಾನಿ ಮೋದಿ ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಕೆ ಮಾಡಿಕೊಂಡು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆಂದು ಟೀಕಿಸಿದರು.
ತಾನು ತನ್ನ ಒಡೆತನದ ಯಾವುದೇ ಆಸ್ತಿಯನ್ನು ಮಣ್ಣಿನಲ್ಲಿ ಮುಚ್ಚಿಟ್ಟಿಲ್ಲ. ಎಲ್ಲವನ್ನು ಘೋಷಿಸಿಕೊಂಡಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೆ ಈ ಸಂಬಂಧ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸುವೆ ಎಂದರು.







