ತಿರೂರ್‌ನಲ್ಲಿ ಸಿಪಿಎಂ-ಆರೆಸ್ಸೆಸ್ ಘರ್ಷಣೆ: ಮನೆಗೆ ನುಗ್ಗಿ ಮಹಿಳೆಯರಿಗೆ ಹಲ್ಲೆ, ಹಲವರಿಗೆ ಗಾಯ

ಪುರತ್ತೂರ್,ಜ.28: ತಿರೂರ್ ಪಡಿಂಞರಕ್ಕರೆಯಲ್ಲಿ ಆರೆಸ್ಸೆಸ್-ಬಿಜೆಪಿ ಘರ್ಷಣೆ ನಡೆದಿದೆ ,. ಡಿವೈಎಫ್‌ಐ ಪ್ರತಿಭಟನೆ ವಿರುದ್ಧ ಕಲ್ಲೆಸತ ನಡೆದು ಸಂಭವಿಸಿದ ಘರ್ಷಣೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ಏಳು ಗಂಟೆಗೆ ಕಣ್ಣೂರಿನಲ್ಲಿ ಬಾಂಬ್ ದಾಳಿಗೆ ಸಂಬಂಧಿಸಿ ಡಿವೈಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಸಮೀಪದ ಕ್ಲಬ್‌ನಿಂದ ಕಲ್ಲೆಸೆತ ನಡೆದಿತ್ತು.
ಆನಂತರ ಘರ್ಷಣೆ ಸ್ಫೋಟಿಸಿದೆ. ಕಲ್ಲೆಸೆತ ಮತ್ತು ಘರ್ಷಣೆಯಿಂದಾಗಿ ಗಾಯಗೊಂಡ ಡಿವೈಎಫ್‌ಐ ಕಾರ್ಯಕರ್ತ ಫೈಜಾಸ್(16)ರನ್ನು ಕಲ್ಲಿಕೋಟೆ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುನ್ನತ್ ಶಬೀರ್‌ರನ್ನು(19) ತಿರೂರ್ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಘಟನೆ ಬಳಿಕ ಸಿಪಿಎಂ ಸ್ಥಳೀಯ ಕಾರ್ಯದರ್ಶಿ ಕೆ.ವಿ.ಎಂ.ಹನೀಫ್ ಮಾಸ್ಟರ್‌ರ ಮನೆಗೆ ನುಗ್ಗಿದ ತಂಡ ಅವರ ಪತ್ನಿ ಹಾಗೂ ಹೆಣ್ಣು ಮಕ್ಕಳನ್ನು ಥಳಿಸಿ ಗಾಯಗೊಳಿಸಿದೆ. ಹನೀಫ್ ಅವರ ಮಗಳು ಒಂಬತ್ತನೆ ತರಗತಿ ವಿದ್ಯಾರ್ಥಿನಿ ಫೆಸ್ಮಿತಾ ಶೇರಿನ್(14), ಶೆಹ್ಲಾ ಶೇರಿನ್(14),ಪತ್ನಿ ಹಫ್ಸಾ(46) ಗಾಯಗೊಂಡಿದ್ದಾರೆ.
ಹಫ್ಸಾರ ಕೈಯಲ್ಲಿದ್ದ 25,000ರೂಪಾಯಿ ಮತ್ತು ಕೊರಳಿನ ಎರಡು ಪವನ್ ಚಿನ್ನದ ಆಭರಣವನ್ನು ಗುಂಪು ಕಿತ್ತುಕೊಂಡಿದೆ. ಗಾಯಾಳು ಮಹಿಳೆಯರನ್ನು ಹಾಗೂ ಆರೆಸ್ಸೆಸ್ ಕಾರ್ಯಕರ್ತರಾದ ಪುಳಿಕ್ಕಲ್ ಶಿಬಿಲಾಲ್(19), ತೃಕ್ಕಣಾಶ್ಶೇರಿ ನಂದು ಎಂಬವರನ್ನು ತಿರೂರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಪೊಲೀಸರು ಬಿಗಿಪೊಲೀಸ್ ಬಂದೋಬಸ್ತು ಏರ್ಪಡಿಸಿದ್ದಾರೆಂದು ವರದಿ ತಿಳಿಸಿದೆ.







