ಶೆಹ್ಲಾ ಮಸೂದ್ ಕೊಲೆ ಪ್ರಕರಣ : ನಾಲ್ವರಿಗೆ ಜೀವಾವಧಿ ಶಿಕ್ಷೆ

ಹೊಸದಿಲ್ಲಿ, ಜ.28: ಪರಿಸರವಾದಿ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಕೊಲೆ ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಐದನೇ ಆರೋಪಿ ಇರ್ಫಾನ್ ಎಂಬಾತನನ್ನು ದೋಷಮುಕ್ತಗೊಳಿಸಿದೆ.
ಶೆಹ್ಲಾ ಮಸೂದ್ ಅವರು 2011ರಲ್ಲಿ ಭೋಫಾಲ್‌ನಲ್ಲಿರುವ ತಮ್ಮ ನಿವಾಸದ ಹೊರಗೆ ಗುಂಡೇಟಿಗೆ ಬಲಿಯಾಗಿದ್ದರು. ಝಹೀದಾ ಪರ್ವೇಝ್ ಎಂಬಾಕೆ ಈ ಪ್ರಕರಣದಲ್ಲಿ ಪ್ರಧಾನ ಸಂಚುಕೋರರಾಗಿದ್ದು , ಸಾಬಾ ಫರೂಕಿ, ಶಾಕ್ವಿಬ್ ಮತ್ತು ತಬಿಷ್ ಸಹಕಾರ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು ಐದನೇ ಆರೋಪಿ ಇರ್ಫಾನ್ ತನಿಖೆಗೆ ಸಹಕರಿಸಿದ ಕಾರಣ ದೋಷಮುಕ್ತಗೊಳಿಸಲಾಗಿದೆ.
ಶೆಹ್ಲಾ ಮಸೂದ್ ಮಧ್ಯಪ್ರದೇಶ ರಾಜ್ಯದ ಬಿಜೆಪಿ ಶಾಸಕ ಧೃವ ನಾರಾಯಣ್ ರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿರುವ ಬಗ್ಗೆ ಮತ್ಸರಗೊಂಡಿದ್ದ ಝಹೀದಾ ಬಾಡಿಗೆ ಕೊಲೆಗಾರರ ನೆರವಿನಿಂದ ಶೆಹ್ಲಾರನ್ನು ಕೊಲ್ಲಿಸಿದ್ದರು ಎಂದು ಸಿಬಿಐ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಝಹೀದಾರ ದಿನಚರಿ ಪುಸ್ತಕದಲ್ಲಿ ಶೆಹ್ಲಾ ಕೊಲೆಯಾಗುವ ಬಗ್ಗೆ ಆಕೆಗೆ ಮೊದಲೇ ಮಾಹಿತಿ ಇತ್ತು ಎಂಬುದರ ಉಲ್ಲೇಖವಿದೆ ಎನ್ನಲಾಗಿದೆ. 2011ರ ಆ.12ರಂದು ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳಲು ಸಿದ್ಧರಾಗಿದ್ದ ಶೆಹ್ಲಾರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.







