ಸಿರಿಧಾನ್ಯಗಳ ಮಹತ್ವವನ್ನು ಅರಿತುಕೊಳ್ಳಿ: ಜಿಲ್ಲಾಧಿಕಾರಿ ವೆಂಕಟೇಶ್
ಜಿಲ್ಲಾ ಮಟ್ಟದ ಫಲಪುಷ್ಪ, ಸಿರಿಧಾನ್ಯ ಮೇಳ ಉದ್ಘಾಟನೆ

ಉಡುಪಿ, ಜ.28: ನಮ್ಮ ಹಿರಿಯರು ನಿತ್ಯ ಜೀವನದಲ್ಲಿ ವ್ಯಾಪಕವಾಗಿ ಬಳಸುತಿದ್ದ ಸಿರಿಧಾನ್ಯಗಳ ಮಹತ್ವ ಇಂದಿನವರಿಗೆ ಮರೆತುಹೋಗಿದೆ. ಸಿರಿಧಾನ್ಯಗಳ ಮಹತ್ವದ ಅರಿವನ್ನು ನಮ್ಮ ಜನರಿಗೆ ಮತ್ತೆ ಮೂಡಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಜಿಲ್ಲಾ ಕೃಷಿ, ತೋಟಗಾರಿಕೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಉಡುಪಿ ಜಿಲ್ಲೆ, ದ.ಕ., ಚಿಕ್ಕಮಗಳೂರು ಉಡುಪಿ ಪ್ರಾಂತೀಯ ಸಹಕಾರ ಸಾವಯನ ಕೃಷಿಕರ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ದೊಡ್ಡಣಗುಡ್ಡೆ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಆಯೋಜಿಸಲಾದ ಮೂರು ದಿನಗಳ ಫಲಪುಷ್ಪಪ್ರದರ್ಶನ, ಸಾವಯವ ಸಿರಿಧಾನ್ಯ ಮೇಳದ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಹಿಸಿ ಅವರು ಮಾತನಾಡುತ್ತಿದ್ದರು.
ಸಿರಿಧಾನ್ಯಗಳಾದ ರಾಗಿ, ಜೋಳ, ನವಣೆ, ಊದಲು, ಉದ್ದು, ಹಸಿರು, ಹುರುಳಿ, ಕೊರಲೆ, ಸಜ್ಜೆ ಮುಂತಾದವುಗಳಲ್ಲಿ ಖನಿಜ ಅಂಶ ಅಧಿಕವಾಗಿವೆ. ಜನರು ಇವುಗಳನ್ನು ಹೆಚ್ಚು ಹೆಚ್ಚು ಬಳಸುವಂತೆ ನೋಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಉಪಾಧ್ಯಕ್ಷೆ ಶಿಲಾ ಕೆ.ಶೆಟ್ಟಿ ಮಾತನಾಡಿ, ಕೃಷಿಕರು ಕೃಷಿಯಿಂದ ವಿಮುಖರಾಗದಂತೆ ನೋಡಿಕೊಳ್ಳಲು ಕೃಷಿಕರಿಗೆ ಕೃಷಿ ಲಾಭದಾ ಯಕವಾಗುವಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಉತ್ಪಾದನೆ ಮತ್ತು ಮಾರುಕಟ್ಟೆ ದರ ನಿಗದಿಯಾಗಬೇಕು. ಹೀಗಾದಾಗ ಮಾತ್ರ ಜಿಲ್ಲೆಯಲ್ಲಿ ಕೃಷಿ ಮತ್ತೆ ಚಿಗುರಿಕೊಳ್ಳಲು ಸಾದ್ಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಕೃಷಿಪರ ವಾತಾವರಣ ಮೂಡಿಸಲು ಇಂತಹ ಕಾರ್ಯಕ್ರುಗಳು ಉತ್ತೇಜನ ನೀಡಲಿ ಎಂದರು.
ಇದೇ ಸಂದರ್ಭದಲ್ಲಿ ಆತ್ಮ ಯೋಜನೆಯಡಿ ರಾಜ್ಯಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಕಾರ್ಕಳ ತಾಲೂಕು ಸಾಣೂರಿನ ಕೃಷಿಕ ಜೆರೋಮ್ ವಿಕ್ಟರ್ ಡಿಸಿಲ್ವ ಇವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಅರಿವು ಮೂಡಿಸಲು ಶಾಲಾ ಕೃಷಿಕ ಸಂಘದ 200 ಮಂದಿ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿರುವರು. ಇದೇ ಸಂದರ್ಭದಲ್ಲಿ ತಾರಸಿ ತೋಟ, ಕಿಚನ್ ಗಾರ್ಡನ್, ಮಲ್ಲಿಗೆ ಬೆಳೆಗಾರರು, ಮಟ್ಟುಗುಳ್ಳು ಬೆಳೆಾರರಿಗೆ ಸವಲತ್ತು ವಿತರಿಸಲಾಯಿತು.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಅಪರ ಕೃಷಿ ನಿರ್ದೇಶಕ (ಬೆಳೆ ಅಭಿವೃದ್ಧಿ ಮತ್ತು ಯೋಜನೆ) ಅಂತೋನಿ ಮರಿಯಾ ಇಮ್ಯಾನುವೆಲ್, ಕೆವಿಕೆಯ ಸಹ ಸಂಶೋಧನ ನಿರ್ದೇಶಕ ಡಾ ಎಂ.ಹನುಮಂತಪ್ಪ, ಜಿಲ್ಲಾ ಕೃಷಿಕ ಸಮಾಜದ ಅಶೋಕ ಕುಮಾರ್ ಕೂಡ್ಗಿ, ಜಿಪಂ ಸದಸ್ಯೆ ಶಿಲ್ಪಾ ಸುವರ್ಣ, ಸಾವಯವ ಕೃಷಿಕರ ಒಕ್ಕೂಟದ ದೇವದಾಸ್ ಹೆಬ್ಬಾರ್, ತಿಮ್ಮಣ್ಣ ಹೆಗಡೆ, ಹಾಪ್ ಕಾಮ್ಸ್ ಅಧಿಕಾರಿ ಲಕ್ಷ್ಮೀನಾರಾಯಣ, ಭಾಕಿಸಂನ ಬಿ.ವಿ.ಪೂಜಾರಿ ಪೆರ್ಡೂರು, ಜಿಲ್ಲಾ ಕೃಷಿಕ ಸಂಘದ ರಾಮಕೃಷ್ಣ ಶರ್ಮ ಬಂಟಕಲ್ಲು ಉಪಸ್ಥಿತರಿದ್ದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿದರು. ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕಾ ವಂದಿಸಿದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಂಜೀವ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಪ್ರದರ್ಶನ ಜನವರಿ 30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.







