ಸಮಾನ ನಾಗರಿಕ ಸಂಹಿತೆ ಜಾರಿ ನಿಶ್ಚಿತ: ಸುಬ್ರಹ್ಮಣ್ಯ ಸ್ವಾಮಿ

ಉಡುಪಿ, ಜ.28: ಕೇಂದ್ರದ ಬಿಜೆಪಿ ಸರಕಾರವು ಸಮಾನ ನಾಗರಿಕ ಸಂಹಿತೆಯನ್ನು ನಿಶ್ಚಿತವಾಗಿ ಜಾರಿಗೆ ತರಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಾನೂನು ಮತ್ತು ಸಂಸದೀಯ ಪ್ರಕೋಷ್ಠದ ವತಿಯಿಂದ ಶನಿವಾರ ಉಡುಪಿ ಕಿದಿಯೂರು ಹೊಟೇಲಿನ ಶೇಷಶಯನ ಸಭಾಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಸಮಾನ ನಾಗರಿಕ ಸಂಹಿತೆ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇದ್ದರೂ ರಾಜ್ಯಸಭೆಯಲ್ಲಿ ಬಹು ಮತದ ಕೊರತೆ ಇದೆ. ಆದರೂ ಜಂಟಿ ಅಧಿವೇಶನ ಕರೆದಾದರೂ ಈ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗುವುದು. ಇದಕ್ಕೆ ದೇಶದ ಶೇ.50ರಷ್ಟು ಮುಸ್ಲಿಮರ ಬೆಂಬಲ ಇದೆ ಎಂದು ಅವರು ತಿಳಿಸಿದರು.
ಅಮೆರಿಕಾ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಇಲ್ಲದ ಕಾನೂನು ಭಾರತದಲ್ಲಿ ಯಾಕೆ ಬೇಕು. ಅಲ್ಲಿಯೂ ಮುಸ್ಲಿಮರು ಇಲ್ಲವೇ. ಇಲ್ಲಿನ ಮುಸ್ಲಿಮರು ನಮ್ಮ ಪೂರ್ವಜರು. ನಾವು ಒಂದೇ ಪರಿವಾರದವರು. ಹಿಂದೂ ಸಂಸ್ಕೃತಿ ನಮ್ಮ ಅಸ್ಮಿತೆಯಾಗಿದೆ. ಅದನ್ನು ಎಲ್ಲರು ಒಪ್ಪಲೇ ಬೇಕು. ಎಲ್ಲ ಧರ್ಮದವರನ್ನು ಸ್ವೀಕಾರ ಮಾಡುವಂತಹ ಪರಂಪರೆ ನಮ್ಮದಾಗಿದೆ. ಇಲ್ಲಿ ಎಲ್ಲರೂ ಸಮಾನರು. ಹೀಗಾಗಿ ಸಮಾನ ನಾಗರಿಕ ಸಂಹಿತೆ ಜಾರಿ ಅತಿ ಅಗತ್ಯವಾಗಿದೆ ಎಂದರು.
ಪ್ರಸ್ತುತ ದೇಶದಲ್ಲಿರುವ 300 ವಿಶ್ವವಿದ್ಯಾನಿಲಯವನ್ನು 2018ರೊಳಗೆ 1200ಕ್ಕೆ ಏರಿಸಬೇಕಾಗಿದೆ. ಯಾವುದೇ ವರ್ಗಕ್ಕೆ ಮೀಸಲಾತಿ ನೀಡುವುದು ಸರಿಯಲ್ಲ. 2018ರೊಳಗೆ ಹೊಸ ಪಠ್ಯಕ್ರಮ ಜಾರಿಗೆ ಬರುವ ಸಾಧ್ಯತೆ ಇದೆ. ಕಾಶ್ಮೀರಕ್ಕೆ ನೀಡಿರುವ 370ವಿಧಿಯನ್ನು ಯಾವುದೇ ಸಂದರ್ಭದಲ್ಲೂ ರದ್ದುಗೊಳಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ವಹಿಸಿದ್ದರು. ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಎಂ.ಕೆ.ಸುವ್ರತ್ ಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಜಿಲ್ಲಾ ಸಂಚಾಲಕ ಕೆ.ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ದರು. ಜಿಲ್ಲಾ ಸಹ ಸಂಚಾಲಕರಾದ ರವೀಂದ್ರ ಬೈಲೂರು, ರವೀಂದ್ರ ಮೊಲಿ ಉಪಸ್ಥಿತರಿದ್ದರು. ಯಶಸ್ವಿನಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು.







