ಅಕಾಡೆಮಿಯ ಅಧ್ಯಕ್ಷ ಸ್ಥಾನಗಳು ಆಯಾ ಕ್ಷೇತ್ರದ ಅರ್ಹರಿಗೆ ದೊರೆಯಲಿ - ಎಡನೀರು ಶ್ರೀ
ಡಾ.ಎಂ.ಪ್ರಭಾಕರ ಜೋಶಿಗೆ ಪಾರ್ತಿ ಸುಬ್ಬ ಪ್ರಶಸ್ತಿ

ಮಂಗಳೂರು.ಜ.28:ವಿವಿಧ ಕ್ಷೇತ್ರದ ಬೆಳವಣಿಗೆ ಸರಕಾರದಿಂದ ರಚನೆಗೊಂಡಿರುವ ಅಧ್ಯಕ್ಷ ಸ್ಥಾನ ಆಯಾ ಕ್ಷೇತ್ರದ ಅನುಭವ ಇರುವ ಅರ್ಹರಿಗೆ ದೊರೆತಾಗ ಉತ್ತಮ ಕೆಲಸಗಳಾಗುತ್ತವೆ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿಶ್ರೀ ತಿಳಿಸಿದರು.
ಅವರು ನಗರದ ಪುರಭವನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ 2016ನೆ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ ಹಾಗೂ ಇತರ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸಾಮಾನ್ಯವಾಗಿ ಅಕಾಡೆಮಿಗಳಲ್ಲಿ ಕ್ಷೇತ್ರದ ಅನುಭವ ಇಲ್ಲದವರು ಆಯ್ಕೆಯಾಗುತ್ತಿರುವುದು ಕಂಡು ಬರುತ್ತಿದೆ.ಆದರೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಲ್ಲಿ ಯಕ್ಷಗಾನದ ಬಗ್ಗೆ ಆಳವಾದ ಜ್ಞಾನ ಹೊಂದಿರುವ ವ್ಯಕ್ತಿಗಳು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ಒಳ್ಳಯ ಪರಂಪರೆ ಎಂದು ಎಡನೀರು ಶ್ರೀ ತಿಳಿಸಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2016ನೆ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಯನ್ನು ಡಾ.ಎಂ .ಪ್ರಭಾಕರ ಜೋಶಿಯವರಿಗೆ ಅಕಾಡೆಮಿಯ ಅಧ್ಯಕ್ಷ ಬೆಳಗಲ್ಲು ವೀರಣ್ಣ ನೀಡಿ ಗೌರವಿಸಿದರು.ಸಮಾರಂಭದಲ್ಲಿ ಸುಬ್ರಾಯ ವೆಂಕಟ್ರಮಣ ಭಟ್,ಗೋಪಾಲಕೃಷ್ಣ ಕುರುಪ್,ಹೆರಂಜಾಲು ಸುಬ್ಬಣ್ಣ ಗಾಣಿಗ,ಉಷಾರಾಣಿ ಬಳ್ಳಾರಿ,ತುಕಾರಾಮ ಮಾರುತಿ,ವಿಲಾಸ ಬಾಯಿ ಮಗೆಪ್ಪ ರಾಯಪ್ಪನವರ್,ನರಹರಿ ಶಾಸ್ತ್ರಿ,ಚಿಕ್ಕ ಚೌಡಯ್ಯ ನಾಯ್ಕ,ನಿಂಗಪ್ಪ ತೋರಣ ಗಟ್ಟಿ,ಶ್ರೀನಿವಾಸ ಸಾಸ್ತಾನ ಮೊದಲಾದವರಿಗೆ ಅಕಾಡೆಮಿಯ ವಾರ್ಷಿಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ,ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್,ಕೊಂಕಣಿ ಅಕಾಡೆಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲೀನೋ ಮೊದಲಾದವರು ಉಪಸ್ಥಿತರಿದ್ದರು.







