ರೋಜರ್ ಫೆಡರರ್-ರಫೆಲ್ ನಡಾಲ್ರಿಂದ ಪ್ರಶಸ್ತಿಗಾಗಿ ಹೋರಾಟ
ಇಂದು ಪುರುಷರ ಸಿಂಗಲ್ಸ್ ಫೈನಲ್

ಮೆಲ್ಬೋರ್ನ್, ಜ.28: ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್ ಫೈನಲ್‌ಗೆ ವೇದಿಕೆ ಸಿದ್ಧವಾಗಿದ್ದು, ರವಿವಾರ ಸಂಜೆ ವಿಶ್ವ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಮೆಲ್ಬೋರ್ನ್ ಪಾರ್ಕ್‌ನಲ್ಲಿ 9ನೆ ಬಾರಿ ಫೈನಲ್‌ನಲ್ಲಿ ಸೆಣಸಾಡಲು ಸಜ್ಜಾಗಿದ್ದಾರೆ.
ನಡಾಲ್ ಹಾಗೂ ಫೆಡರರ್ ಕಳೆದ ವರ್ಷ ಗಾಯದ ಸಮಸ್ಯೆಯಿಂದಾಗಿ ಹಲವು ಪಂದ್ಯಗಳಿಂದ ಹೊರಗುಳಿದಿದ್ದರು. ಇವರಿಬ್ಬರ ಅನುಪಸ್ಥಿತಿಯಲ್ಲಿ ನೊವಾಕ್ ಜೊಕೊವಿಕ್ ಹಾಗೂ ಆ್ಯಂಡಿ ಮರ್ರೆ ಟೆನಿಸ್ ಅಂಗಳದಲ್ಲಿ ಮಿಂಚಿದ್ದರು.
ಕ್ರಮವಾಗಿ 9ನೆ ಹಾಗೂ 17ನೆ ಶ್ರೇಯಾಂಕಿತ ಫೆಡರರ್ ಹಾಗೂ ನಡಾಲ್ 2011ರ ಫ್ರೆಂಚ್ ಓಪನ್ ಬಳಿಕ ಮೊದಲ ಬಾರಿ ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಈ ಇಬ್ಬರು ಆಟಗಾರರು ಒಟ್ಟಿಗೆ 31 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು ಈ ಪೈಕಿ ಫೆಡರರ್ 17 ಪ್ರಶಸ್ತಿ ಜಯಿಸಿದ್ದಾರೆ.
2004ರ ಮಿಯಾಮಿ ಮಾಸ್ಟರ್ಸ್‌ನಲ್ಲಿ ನಡಾಲ್ ತನ್ನ 17ನೆ ಹರೆಯದಲ್ಲಿ ಫೆಡರರ್‌ರನ್ನು ಮೊದಲ ಬಾರಿ ಮುಖಾಮುಖಿಯಾಗಿದ್ದರು. ಆ ಪಂದ್ಯದಲ್ಲಿ ಸ್ವಿಸ್ ಆಟಗಾರನನ್ನು ಮಣಿಸಿ ವಿಶ್ವದ ಗಮನ ಸೆಳೆದಿದ್ದರು.
ಫೆಡರರ್ ಸುಮಾರು 40 ವರ್ಷಗಳ ಬಳಿಕ ಗ್ರಾನ್‌ಸ್ಲಾಮ್ ಟೂರ್ನಿಯ ಫೈನಲ್‌ನಲ್ಲಿ ಆಡುತ್ತಿರುವ ಹಿರಿಯ ಆಟಗಾರನಾಗಿದ್ದಾರೆ.
ಏಳನೆ ಪ್ರಶಸ್ತಿಯತ್ತ ಸಾನಿಯಾ ಚಿತ್ತ
ಮೆಲ್ಬೋರ್ನ್, ಜ.28: ಸಾನಿಯಾ ಮಿರ್ಝಾ ರವಿವಾರ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕ್ರೊಯೇಷಿಯದ ಇಯಾನ್ ಡೊಡಿಗ್‌ರೊಂದಿಗೆ ಫೈನಲ್ ಪಂದ್ಯ ಆಡಲಿದ್ದು,ಏಳನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಚಿತ್ತವಿರಿಸಿದ್ದಾರೆ.
ಸಾನಿಯಾ ಅವರು ಡೊಡಿಗ್‌ರೊಂದಿಗೆ ಇದೇ ಮೊದಲ ಬಾರಿ ಫೈನಲ್ ಆಡುತ್ತಿದ್ದು, ಈ ತನಕ 3 ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. 30ರ ಪ್ರಾಯದ ಸಾನಿಯಾ 2014ರಲ್ಲಿ ಕೊನೆಯ ಬಾರಿ ಬ್ರೆಝಿಲ್‌ನ ಬ್ರುನೊ ಸೊರೆಸ್‌ರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.
ಸಾನಿಯಾ ಆಸ್ಟ್ರೇಲಿಯನ್ ಓಪನ್‌ನಲ್ಲಿ 5ನೆ ಬಾರಿ ಫೈನಲ್ ಪಂದ್ಯ ಆಡುತ್ತಿದ್ದು, 2008ರಲ್ಲಿ ಮಹೇಶ್ ಭೂಪತಿಯೊಂದಿಗೆ ರನ್ನ್ರರ್ ಅಪ್, 2009ರಲ್ಲಿ ಪ್ರಶಸ್ತಿಯನ್ನು ಜಯಿಸಿದ್ದರು. 2014ರಲ್ಲಿ ಮತ್ತೊಮ್ಮೆ ರನ್ನರ್-ಅಪ್ ಆಗಿದ್ದರು.







