ಸರಣಿ ಉಳಿಸಿಕೊಳ್ಳಲು ಕೊಹ್ಲಿ ಪಡೆ ಹೋರಾಟ
ಇಂದು ದ್ವಿತೀಯ ಟ್ವೆಂಟಿ-20 ಪಂದ್ಯ

ನಾಗ್ಪುರ, ಜ.28: ಸುಮಾರು 15 ತಿಂಗಳ ಬಳಿಕ ತವರು ನೆಲದಲ್ಲಿ ಸರಣಿ ಸೋಲಿನ ಭೀತಿ ಎದುರಿಸುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ರವಿವಾರ ಇಲ್ಲಿ ನಡೆಯಲಿರುವ ಎರಡನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡಲಿದೆ. ಭಾರತ 2015ರ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕದ ವಿರುದ್ಧದ ಸರಣಿಯನ್ನು 2-3 ಅಂತರದಿಂದ ಸೋತಿತ್ತು. ಆ ಬಳಿಕ ಸ್ವದೇಶದಲ್ಲಿ ಆಡಿರುವ ಸರಣಿಯಲ್ಲಿ ಸೋತಿಲ್ಲ.
ಕಾನ್ಪುರದಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದಿಂದ ಸೋತಿರುವ ಭಾರತ ನಾಗ್ಪುರದಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿ ಸಮಬಲಗೊಳಿಸಿ ಸ್ಪರ್ಧೆಯಲ್ಲಿ ಉಳಿಯಲು ಎದುರು ನೋಡುತ್ತಿದೆ.
ಕೊಹ್ಲಿ ನಾಯಕತ್ವದಲ್ಲಿ ಸ್ವದೇಶದಲ್ಲಿ ಆಡಿರುವ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಜಯಭೇರಿ ಬಾರಿಸಿದೆ. ನಾಗ್ಪುರದಲ್ಲಿ ಈ ಹಿಂದೆ ಆಡಿದ್ದ ಎರಡು ಪಂದ್ಯಗಳನ್ನು ಸೋತಿರುವ ಭಾರತ ಬಲಿಷ್ಠ 11 ಆಟಗಾರರನ್ನು ಒಳಗೊಂಡ ತಂಡವನ್ನು ಕಣಕ್ಕಿಳಿಸಲು ಯೋಜನೆ ಹಾಕಿಕೊಂಡಿದೆ.
ಜಮ್ತಾದ ವಿಡಿಸಿಎ ಸ್ಟೇಡಿಯಂನಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವ ಚಾಂಪಿಯನ್‌ಶಿಪ್‌ನ ಲೀಗ್ ಹಂತದ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಧೋನಿ ನಾಯಕತ್ವದ ಭಾರತ ತಂಡ ಸೋಲುಂಡಿತ್ತು. ಸ್ಟಾರ್ ಆಟಗಾರರನ್ನು ಒಳಗೊಂಡಿದ್ದ ಭಾರತದ ತಂಡ ಕಿವೀಸ್ ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನರ್ ಹಾಗೂ ಐಶ್ ಸೋಧಿಗೆ ನಿರುತ್ತರವಾಗಿತ್ತು.
ಕಾನ್ಪುರದಲ್ಲಿ ನಡೆದ ಮೊದಲ ಟ್ವೆಂಟಿ-20ಯಲ್ಲಿ ಪ್ರವಾಸಿ ತಂಡದ ವೇಗದ ಬೌಲರ್‌ಗಳು ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ್ದರು. ನಾಗ್ಪುರದಲ್ಲಿ ಕೊಹ್ಲಿ, ಧೋನಿ ಹಾಗೂ ಯುವರಾಜ್ ಸಿಂಗ್ ಅವರನ್ನೊಳಗೊಂಡ ಭಾರತವನ್ನು ಬೇಗನೆ ಕಟ್ಟಿಹಾಕಲು ಆಂಗ್ಲರ ಬಳಗ ಎದುರು ನೋಡುತ್ತಿದೆ.
ಕನ್ನಡಿಗ ಮನೀಶ್ ಪಾಂಡೆ 6ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆದರೆ, ಇನ್ನೊರ್ವ ಕನ್ನಡಿಗ ಕೆಎಲ್ ರಾಹುಲ್ ಆರಂಭಿಕ ಆಟಗಾರನಾಗಿ ಅನಿಶ್ಚಿತ ಪ್ರದರ್ಶನ ನೀಡುತ್ತಿದ್ದು, ನಾಯಕ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಆಡುವ ಬಳಗವನ್ನು ಆಯ್ಕೆ ಮಾಡುವಾಗ ರಾಹುಲ್ ಕಳಪೆ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದಾರೆ.
ಆತಿಥೇಯ ತಂಡ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆಯಿದ್ದು, ಯುವ ಪ್ರತಿಭೆ ರಿಷಬ್ ಪಂತ್‌ರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಪಂತ್ ಮುಂಬೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 50 ಓವರ್‌ಗಳ ಅಭ್ಯಾಸ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ಮಾಡಿದ್ದರು.
ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಕೇವಲ 147 ರನ್ ಗಳಿಸಿತ್ತು. ಮಾಜಿ ನಾಯಕ ಎಂಎಸ್ ಧೋನಿ(36ರನ್) ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು.
ಮತ್ತೊಂದೆಡೆ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, 28, 102, 43 ಹಾಗೂ 51ರನ್ ಗಳಿಸಿದ್ದಾರೆ. ಪ್ರವಾಸಿ ತಂಡದ ಅಗ್ರ ಸರದಿಯಲ್ಲಿ ಐದಾರು ಬ್ಯಾಟ್ಸ್‌ಮನ್‌ಗಳು ಬಿಗ್ ಹಿಟ್ಟರ್‌ಗಳಾಗಿದ್ದಾರೆ.
ಭಾರತ(ಸಂಭಾವ್ಯರು): ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್/ರಿಷಬ್ ಪಂತ್, ಸುರೇಶ್ ರೈನಾ, ಯುವರಾಜ್ ಸಿಂಗ್, ಎಂಎಸ್ ಧೋನಿ(ವಿಕೆಟ್‌ಕೀಪರ್), ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಪರ್ವೆಝ್ ರಸೂಲ್/ಅಮಿತ್ ಮಿಶ್ರಾ, ಯುಝ್ವೆಂದ್ರ ಚಾಹಲ್,ಭುವನೇಶ್ವರ್ ಕುಮಾರ್/ಆಶೀಷ್ ನೆಹ್ರಾ/ಜಸ್‌ಪ್ರಿತ್ ಬುಮ್ರಾ.
ಇಂಗ್ಲೆಂಡ್(ಸಂಭಾವ್ಯರು): ಸ್ಯಾಮ್ ಬಿಲ್ಲಿಂಗ್ಸ್, ಜೇಸನ್ ರಾಯ್, ಜೋ ರೂಟ್, ಇಯಾನ್ ಮೊರ್ಗನ್(ನಾಯಕ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಮೊಯಿನ್ ಅಲಿ, ಕ್ರಿಸ್ ಜೋರ್ಡನ್, ಲಿಯಾಮ್ ಪ್ಲಂಕಟ್, ಆದಿಲ್ ರಶೀದ್, ಟೈಮಲ್ ಮಿಲ್ಸ್.
ಪಿಚ್ ಹಾಗೂ ವಾತಾವರಣ
ನಾಗ್ಪುರ ಸ್ಟೇಡಿಯಂ ಆಕಾರದಲ್ಲಿ ದೊಡ್ಡದಿದೆ. ಪಿಚ್ ಚಪ್ಪಟೆಯಾಗಿದ್ದು, ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳಿಗೆ ನೆರವಾಗುವ ಸಾಧ್ಯತೆಯಿದೆ.
ಹೈಲೈಟ್ಸ್
*ಅಮಿತ್ ಮಿಶ್ರಾಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರೈಸಲು ಇನ್ನು ಒಂದೇ ವಿಕೆಟ್ ಅಗತ್ಯವಿದೆ.
*ಭಾರತ ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಎರಡು ಟ್ವೆಂಟಿ-20 ಪಂದ್ಯಗಳನ್ನು ಆಡಿದೆ. ರನ್ ಬೆನ್ನಟ್ಟುವಾಗ ಎರಡು ಪಂದ್ಯಗಳನ್ನು ಸೋತಿದೆ. 2009ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 29 ರನ್ ಹಾಗೂ 2016ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್‌ನ ವಿರುದ್ಧ 47 ರನ್‌ಗಳ ಅಂತರದಿಂದ ಸೋತಿದೆ.
*ವಿಸಿಎ ಸ್ಟೇಡಿಯಂ ಈವರೆಗೆ 10 ಟ್ವೆಂಟಿ-20 ಪಂದ್ಯಗಳ ಆತಿಥ್ಯವಹಿಸಿದ್ದು, ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ ಏಳು ಪಂದ್ಯಗಳನ್ನು ಗೆದ್ದುಕೊಂಡರೆ, ಚೇಸಿಂಗ್ ಮಾಡುವ ತಂಡ 3 ಪಂದ್ಯಗಳನ್ನು ಜಯಿಸಿದೆ.
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:30







