ಎಲ್ಲ ಜನಧನ್ ಖಾತೆಗಳೂ ಕಪ್ಪುಹಣ ಜಮೆಗೆ ದುರ್ಬಳಕೆಯಾಗಿಲ್ಲ: ಪಿ. ಚಿದಂಬರಂ
ಕೋಲ್ಕತಾ,ಜ.28: ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು, ಕಪ್ಪುಹಣವನ್ನು ಬಿಳಿಯಾಗಿಸಲು ಹೆಚ್ಚಿನ ಜನಧನ್ ಖಾತೆಗಳ ದುರ್ಬಳಕೆಯಾಗಿದೆ ಎನ್ನುವುದಕ್ಕೆ ಸಾಕ್ಷಾಧಾರಗಳಿಲ್ಲ ಎಂದು ಶನಿವಾರ ಇಲ್ಲಿ ಹೇಳಿದರು.
ಕೋಲ್ಕತಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು,ಕಪ್ಪುಹಣವನ್ನು ಬಿಳಿಯಾಗಿಸಲು ಜನಧನ್ ಖಾತೆಗಳನ್ನು ಸಾರಸಗಟಾಗಿ ಬಳಸಿಕೊಳ್ಳಲಾಗಿದೆ ಎನ್ನುವುದಕ್ಕೆ ಸಾಕ್ಷಾಧಾರಗಳಿಲ್ಲ. ಸುಮಾರು ಶೇ.25ರಷ್ಟು ಜನಧನ್ ಖಾತೆಗಳು ಶೂನ್ಯ ಶಿಲ್ಕು ಹೊಂದಿವೆ ಮತ್ತು ಉಳಿದ ಖಾತೆಗಳಲ್ಲಿ ಸರಾಸರಿ 27,000 ರೂ.ಹಣವಿದೆ. ಸಣ್ಣ ಸಂಖ್ಯೆಯಲ್ಲಿ ಇಂತಹ ಖಾತೆಗಳನ್ನು ಕಪ್ಪುಹಣ ವ್ಯವಹಾರಕ್ಕೆ ಬಳಸಿರಬಹುದು ಎಂದು ಹೇಳಿದರು.
ಭಾರೀ ಪರಿಣಾಮಗಳನ್ನು ಹೊಂದಿದ್ದ ನೋಟು ರದ್ದತಿಯಂತಹ ಬೃಹತ್ ನಿರ್ಧಾರವನ್ನು ಒಬ್ಬನೇ ವ್ಯಕ್ತಿ ತೆಗೆದುಕೊಳ್ಳುವಂತಿಲ್ಲ ಎನ್ನುವುದು ನೋಟು ರದ್ದತಿ ಕುರಿತು ತನ್ನ ತಕರಾರು ಆಗಿದೆ. ವಿತ್ತ ಸಚಿವಾಲಯದ ಮೂವರು ಅತ್ಯಂತ ಮುಖ್ಯ ಅಧಿಕಾರಿಗಳಾದ ಹಣಕಾಸು ಕಾರ್ಯದರ್ಶಿ,ಬ್ಯಾಂಕಿಂಗ್ ಕಾರ್ಯದರ್ಶಿ ಮತ್ತು ಮುಖ್ಯ ಆರ್ಥಿಕ ಸಲಹೆಗಾರರು ಕಳೆದ 70 ದಿನಗಳಲ್ಲಿ ತುಟಿಪಿಟಕ್ಕೆಂದಿಲ್ಲ. ಇದು ಅವರೊಂದಿಗೆ ಸಮಾಲೋಚನೆ ನಡೆಸಿರಲಿಲ್ಲ ಅಥವಾ ಸಮಾಲೋಚನೆ ನಡೆಸಿದ್ದರೂ ಅವರು ಅದಕ್ಕೆ ಒಪ್ಪಿಕೊಂಡಿರಲಿಲ್ಲ ಎನ್ನುವುದನ್ನು ಸೂಚಿಸುತ್ತಿದೆ ಎಂದರು.
ಮಾಜಿ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರೂ ನೋಟು ಅಮಾನ್ಯವನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಐದು ಪುಟಗಳ ಟಿಪ್ಪಣಿಯನ್ನು ಕಳುಹಿಸಿದ್ದರು ಮತ್ತು ಇದೇ ಕಾರಣದಿಂದಾಗಿ ಅವರನ್ನು ಮನೆಗೆ ಕಳುಹಿಸಲಾಗಿತ್ತು ಎಂದ ಚಿದಂಬರಂ, ನೋಟುಗಳನ್ನು ಅಮಾನ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಅವಸರದಲ್ಲಿದ್ದಂತಿತ್ತು ಎಂದರು.
ತನ್ನ ಅಂದಾಜಿನಂತೆ ನೋಟು ರದ್ದತಿ ಕ್ರಮದಿಂದಾಗಿ ದೇಶದ ಜಿಡಿಪಿ ಬೆಳವಣಿಗೆಯು ಕನಿಷ್ಠ ಶೇ.1ರಷ್ಟು ಕುಸಿತವನ್ನು ಕಾಣಲಿದೆ ಎಂದರು.
ನೋಟು ರದ್ದತಿ ಕ್ರಮದಿಂದಾಗಿ ಹಲವಾರು ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮುಚ್ಚಲ್ಪಟ್ಟಿವೆ ಮತ್ತು ಅವು ಚೇತರಿಸಿಕೊಳ್ಳಲು ತಿಂಗಳುಗಟ್ಟಲೆ ಸಮಯಾವಕಾಶ ಬೇಕಾಗುತ್ತದೆ ಎಂದರು. ನಗದು ಕೊರತೆ ಈಗ ಸುಧಾರಣೆಯಾಗುತ್ತಿದೆ ಎನ್ನುವುದನ್ನು ಅವರು ತಳ್ಳಿಹಾಕಿದರು.





