ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಚಾಲನೆ
ಹೊಸದಿಲ್ಲಿ, ಜ.28: ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐದು ವರ್ಷದ ಕೆಳಗಿನ ಹರೆಯದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು 2017ರ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಿದರು.
ಪೋಲಿಯೊ ಮುಕ್ತ ದೇಶ ಎಂಬ ಸ್ಥಾನಮಾನವನ್ನು ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮದಲ್ಲಿ ಐದು ವರ್ಷದ ಕೆಳಹರೆಯದ 17 ಕೋಟಿ ಮಕ್ಕಳಿಗೆ ಲಸಿಕೆ ಹಾಕುವ ಯೋಜನೆಯಿದೆ. ರಾಷ್ಟ್ರೀಯ ಪ್ರತಿರಕ್ಷಣಾ ದಿನದ ಮುನ್ನಾದಿನ ರಾಷ್ಟ್ರಮಟ್ಟದ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಮುಖರ್ಜಿ ಚಾಲನೆ ನೀಡಿದ್ದು, ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಸಹಾಯಕ ಆರೋಗ್ಯ ಸಚಿವರಾದ ಅನುಪ್ರಿಯಾ ಪಟೇಲ್ ಮತ್ತು ಫಾಗನ್ ಸಿಂಗ್ ಕುಲಸ್ತೆ ಉಪಸ್ಥಿತರಿದ್ದರು. ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ನೈಜೀರಿಯಾ ದೇಶಗಳಿಂದ ಪೋಲಿಯೋ ರೋಗ ಆಮದು ಆಗಬಹುದಾದ ಅಪಾಯದ ಹಿನ್ನೆಲೆಯಲ್ಲಿ ಸರಕಾರವು ಹಲವು ನೂತನ ಲಸಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ರೋಗ ನಿರೋಧಕ ಕಾರ್ಯಕ್ರಮವನ್ನು ಸಶಕ್ತಗೊಳಿಸಿದೆ. ಈ ಮೂರು ರಾಷ್ಟ್ರಗಳಲ್ಲಿ ಈಗಲೂ ಪೋಲಿಯೊ ರೋಗದ ಪ್ರಕರಣಗಳು ವರದಿಯಾಗುತ್ತಿದೆ. ಆದ್ದರಿಂದ ವಿಶ್ವಮಟ್ಟದಲ್ಲಿ ಪೋಲಿಯೊ ರೋಗ ನಿರ್ಮೂಲನೆಗೊಳ್ಳುವ ವರೆಗೆ ರೋಗ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರಿಯಲಿದೆ . ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಪೋಲಿಯೊ ನಿರೋಧಕ ಕಾರ್ಯಕ್ರಮ ಹಾಗೂ ಉನ್ನತ ಗುಣಮಟ್ಟದ ಪೋಲಿಯೊ ನಿಗಾ ವ್ಯವಸ್ಥೆಯ ಮೂಲಕ ಇದನ್ನು ನಡೆಸಲಾಗುತ್ತದೆ ಎಂದು ಸಚಿವ ನಡ್ಡಾ ತಿಳಿಸಿದ್ದಾರೆ. 2014ರ ಮಾರ್ಚ್ 27ರಂದು ವಿಶ್ವ ಆರೋಗ್ಯ ಸಂಘಟನೆಯು ನೀಡಿರುವ ಪೋಲಿಯೊ ಮುಕ್ತ ಪ್ರಮಾಣಪತ್ರದಲ್ಲಿ ಸಂಪೂರ್ಣ ಆಗ್ನೇಯ ಏಶ್ಯಾ ವಲಯವನ್ನು ಗುರುತಿಸಿದ್ದು ಇದರಲ್ಲಿ ಭಾರತವೂ ಸೇರಿದೆ. ಇದು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದ ಇತಿಹಾಸದಲ್ಲಿ ಬಹುದೊಡ್ಡ ಸಾಧನೆಯಾಗಿದೆ ಎಂದವರು ಬಣ್ಣಿಸಿದರು. ಗಡಿ ಪ್ರದೇಶದಲ್ಲಿ ಪೋಲಿಯೊ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಿರಂತರ ಹಮ್ಮಿಕೊಳ್ಳಲಾಗುತ್ತಿದೆ, ಭಾರತ ಮತ್ತು ಇತರ ಎಂಟು ರಾಷ್ಟ್ರಗಳ ನಡುವೆ ಸಂಚರಿಸುವ ಪ್ರವಾಸಿಗರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡುವ ಪತ್ರವನ್ನು ಹಂಚಲಾಗುತ್ತಿದೆ. ತುರ್ತು ಸಿದ್ಧತೆ ಮತ್ತು ಪ್ರತಿವರ್ತನಾ ಯೋಜನೆಯನ್ವಯ ಪೋಲಿಯೊ ವೈರಸ್ ಕುರಿತು ಮಾಹಿತಿ ಬಂದೊಡನೆ ತುರ್ತಾಗಿ ಸ್ಪಂದಿಸಲು ‘ತುರ್ತು ಪ್ರತಿವರ್ತನಾ ತಂಡ’ಗಳನ್ನು ಎಲ್ಲಾ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಚಿಸಲಾಗಿದೆ ಎಂದವರು ತಿಳಿಸಿದ್ದಾರೆ.





