ಬಿಜೆಪಿಯೊಂದಿಗೆ ಮೈತ್ರಿಯಿಂದ 25 ವರ್ಷ ಹಾಳಾಯಿತು:ಶಿವಸೇನೆ
ಮುಂಬೈ,ಜ.28: ಮಹಾರಾಷ್ಟ್ರದಲ್ಲಿ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲು ನಿರ್ಧರಿಸಿರುವ ಶಿವಸೇನೆಯು ಇಂದು ಬಿಜೆಪಿಯನ್ನು ತೀವ್ರ ತರಾಟೆಗೆತ್ತಿಕೊಂಡಿತು. ‘ಹಿಂದುತ್ವ ’ಮತ್ತು ಮಹಾರಾಷ್ಟ್ರದ ಹಿತಾಸಕ್ತಿಗಳಿಗಾಗಿ ಕೇಸರಿ ಪಕ್ಷದೊಡನೆ ಮೈತ್ರಿಯಿಂದಾಗಿ ಕಾಲು ಶತಮಾನ ವ್ಯರ್ಥವಾಗಿಬಿಟ್ಟಿತು ಎಂದು ಹೇಳಿದೆ.
ತನ್ನ ‘ಜಾತ್ಯತೀತತೆ ’ಯನ್ನು ತೋರಿಸಲು ಬಿಜೆಪಿ ತಪ್ಪುದಾರಿಯಲ್ಲಿ ನಡೆಯುತ್ತಿದೆ ಎಂದು ಆಪಾದಿಸಿರುವ ಸೇನೆ, ತನ್ನ ಉದ್ದೇಶ ಸಾಧನೆಗಾಗಿ ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಳಕ್ ಅವರನ್ನೂ ‘ದೇಶದ್ರೋಹಿ’ಗಳು ಎಂಬುದಾಗಿ ಬಣ್ಣಿಸಲು ಅದು ಹಿಂಜರಿಯು ವುದಿಲ್ಲ ಎಂದು ಕುಟುಕಿದೆ. ಹಿಂದುತ್ವ ಮತ್ತು ರಾಜ್ಯದ ಅಭ್ಯುದಯಕ್ಕಾಗಿ ಕಳೆದ 25 ವರ್ಷಗಳಿಂದಲೂ ನಾವಿದನ್ನು ಅನುಭವಿಸುತ್ತಿದ್ದೇವೆ. ಆದರೆ ಈ ಎಲ್ಲ 25 ವರ್ಷಗಳು ವ್ಯರ್ಥವಾಗಿಬಿಟ್ಟಿವೆ. 25ವರ್ಷಗಳ ಹಿಂದೆ ಏನಾಗಬೇಕಿತ್ತೋ ಅದು ಈಗ ಸಂಭವಿಸಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾನಾ’ದ ಶನಿವಾರದ ಸಂಚಿಕೆಯ ಸಂಪಾದಕೀಯ ಲೇಖನವು ಝಾಡಿಸಿದೆ.
ಹಿಂದುತ್ವದ ಕೊರಳನ್ನು ಸುತ್ತಿಕೊಂಡಿದ್ದ ಕುಣಿಕೆ ಕೊನೆಗೂ ಬಿಚ್ಚಿಕೊಂಡಿದೆ, ಇದರೊಂದಿಗೆ ರಾಜ್ಯವು 25 ವರ್ಷಗಳಲ್ಲಿ ಮೊದಲಬಾರಿಗೆ ಹೊಸ ಉಸಿರನ್ನು ತೆಗೆದುಕೊಳ್ಳಲಿದೆ ಎಂದಿರುವ ಲೇಖನವು, 2014ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೇ ಬಿಜೆಪಿ-ಸೇನೆ ನಡುವಿನ ಮೈತ್ರಿಯು ಅಂತ್ಯಗೊಂಡಿತ್ತು ಮತ್ತು ಹಿಂದುತ್ವ ಹಾಗೂ ಮಹಾರಾಷ್ಟ್ರದ ಹಿತಾಸಕ್ತಿಗಳಿಗಾಗಿ ಕೇವಲ ಸಂಬಂಧವೊಂದು ಉಳಿದುಕೊಂಡಿತ್ತು. ಆದರೆ ಪ್ರತಿಯೊಂದನ್ನೂ ಹಣ ಮತ್ತು ಅಧಿಕಾರ ಬಲದಿಂದ ತನ್ನದಾಗಿಸಿಕೊಳ್ಳುವ ದುರುದ್ದೇಶದಿಂದಾಗಿ ಬಿಜೆಪಿ ಅದನ್ನೂ ಉಳಿಸಿಕೊಳ್ಳಲಿಲ್ಲ ಎಂದು ಹೇಳಿದೆ.
ಈ ಜನರು ಕಾಂಗ್ರೆಸ ಆಡಳಿತದಲ್ಲಿ ಅಧಿಕಾರದಲ್ಲಿ ದ್ದವರಿಗಿಂತ ಕೆಟ್ಟವರಾಗಿದ್ದಾರೆ. ಬಿಜೆಪಿ ಯೊಂದಿಗೆ ಕೈ ಜೋಡಿಸಿದಾಗ ನಾವು ‘ಮೈತ್ರಿ ಧರ್ಮ’ವನ್ನು ಗಮನದಲ್ಲಿಟ್ಟು ಕೊಂಡಿದ್ದೆವು. ಆದರೆ ಬಿಜೆಪಿ ತನ್ನ ಹೃದಯದಲ್ಲಿ ಕಪಟವನ್ನು ಬಚ್ಚಿಟ್ಟುಕೊಂಡಿತ್ತು. ಇಲ್ಲದಿದ್ದರೆ ಅದು ಜನತೆಯ ಹಿತಾಸಕ್ತಿಗಳನ್ನು ಗಮನಿಸುವ ಬದಲು ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಚುನಾವಣೆಗಳನ್ನು ಬಳಸಿಕೊಳ್ಳುತ್ತಿರಲಿಲ್ಲ ಎಂದು ಅದು ಟೀಕಿಸಿದೆ.
ರಾಜಕೀಯ ಲಾಭಕ್ಕಾಗಿ ಶಿವಾಜಿ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಆದರೆ ಶಿವಾಜಿ ಮಹಾರಾಜರ ಆದರ್ಶಗಳೇನಾದವು? ಅವರೆಂದೂ ಧರ್ಮದ ರಾಜಕೀಯವನ್ನು ಮಾಡಿರಲಿಲ್ಲ ಎಂದಿರುವ ಸೇನೆ, ಬಿಜೆಪಿಗೆ ಧರ್ಮರಕ್ಷಣೆ ಬೇಕಾಗಿಲ್ಲ, ಅದು ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡು ಖುರ್ಚಿಯನ್ನುಳಿಸಿಕೊಳ್ಳಲು ನೋಡುತ್ತಿದೆ. ಅವರಿಗೆ ಯಾವುದರಿಂದ ಲಾಭವಾಗುತ್ತದೆಯೋ ಅದೇ ಅವರ ಧರ್ಮವಾಗಿದೆ ಎಂದು ಹೇಳಿದೆ.





