ಭನ್ಸಾಲಿಗೆ ಹಲ್ಲೆ: ಬಾಲಿವುಡ್ ತೀವ್ರ ಖಂಡನೆ
‘ಪದ್ಮಾವತಿ’ ಚಿತ್ರ ತಂಡದ ಮೇಲೆ ದಾಂಧಲೆ
ಜೈಪುರ,ಜ.28: ಶುಕ್ರವಾರ ಇಲ್ಲಿನ ಜಯಗಡ ಕೋಟೆಯಲ್ಲಿ ‘ಪದ್ಮಾವತಿ’ ಚಿತ್ರದ ಸೆಟ್‌ನಲ್ಲಿ ನಿರ್ದೇಶಕ ಸಂಜಯ ಲೀಲಾ ಭನ್ಸಾಲಿಯವರ ಮೇಲಿನ ಹಲ್ಲೆಯನ್ನು ಚಿತ್ರೋದ್ಯಮವು ಕಟುವಾದ ಶಬ್ದಗಳಲ್ಲಿ ಖಂಡಿಸಿದೆ. ಘಟನೆಯ ಕುರಿತು ಬಾಲಿವುಡ್ ಗಣ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶವನ್ನು ಕಾರಿದ್ದಾರೆ.
ಹಲ್ಲೆ ಸಂದರ್ಭ ಭನ್ಸಾಲಿಯವರಲ್ಲಿದ್ದ ಅಸಹಾಯಕತೆ ಮತ್ತು ಸಿಟ್ಟಿನ ಭಾವನೆ ನನ್ನನ್ನು ಕಾಡುತ್ತಿದೆ. ಇದು ನಮ್ಮ ಭವಿಷ್ಯವಲ್ಲ. ನಿರ್ಮಾಪಕ ಮತ್ತು ಆತನ ಮುಕ್ತ ಧ್ವನಿಯ ಹಕ್ಕಿನ ಮೇಲೆ ಹಲ್ಲೆ ಉತ್ತರವಲ್ಲ. ತಥಾಕಥಿತ ಇತಿಹಾಸಕಾರರು ಮತ್ತು ನೈತಿಕ ಪೊಲೀಸರು ಜಿಗುಪ್ಸೆ ಮೂಡಿಸಿದ್ದಾರೆ ಎಂದು ಕರಣ್ ಜೋಹರ್ ಟ್ವೀಟಿಸಿದ್ದಾರೆ.
ಇಂತಹ ಕೃತ್ಯಗಳ ವಿರುದ್ಧ ಚಿತ್ರರಂಗ ಒಂದಾಗಬೇಕು ಎಂದಿರುವ ಅನುರಾಗ್ ಕಶ್ಯಪ್ ಅವರು, ಕರಣಿ ಸೇನಾಕ್ಕೆ ನಾಚಿಕೆಯಾಗಬೇಕು. ನಾನು ರಜಪೂತ ಎಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತಿದೆ. ನರ ಸತ್ತ ಹೇಡಿಗಳು ಎಂದು ಜರಿದಿದ್ದಾರೆ.
ಇಡೀ ಘಟನೆ ನನಗೆ ದುಃಖವನ್ನುಂಟು ಮಾಡಿದೆ. ನಮ್ಮ ಪೂರ್ವಜರು ಹಿಂಸೆಯನ್ನು ಬೋಧಿಸಿರಲಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ಟ್ವೀಟಿಸಿದ್ದಾರೆ. ಹೃತಿಕ್ ರೋಷನ್, ರಿಷಿ ಕಪೂರ್,ಫರ್ಹಾನ್ ಅಖ್ತರ್,ಆಲಿಯಾ ಭಟ್,ಸೋನಂ ಕಪೂರ್ ಮುಂತಾದವರೂ ಭನ್ಸಾಲಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕ್ಷಮೆ ಯಾಚಿಸಲು ಕರಣಿ ಸೇನಾ ನಿರಾಕರಣೆ: ‘ಪದ್ಮಾವತಿ’ ಚಿತ್ರದ ಸೆಟ್‌ನಲ್ಲಿ ನಿರ್ದೇಶಕ ಸಂಜಯ ಲೀಲಾ ಭನ್ಸಾಲಿಯವರ ಮೇಲೆ ಹಲ್ಲೆ ನಡೆಸಿದ್ದ ತನ್ನ ಕೃತ್ಯಕ್ಕೆ ಕ್ಷಮೆ ಯಾಚಿಸಲು ನಿರಾಕರಿಸಿದ ರಜಪೂತ ಕರಣಿ ಸೇನಾ, ಚಿತ್ರತಂಡವು ಗಾಳಿಯಲ್ಲಿ ಗುಂಡು ಹಾರಿಸಿತ್ತು ಮತ್ತು ಇದು ತನ್ನ ಸ್ವಯಂಸೇವಕರನ್ನು ಕೆರಳಿಸಿತ್ತು ಎಂದು ಪ್ರತಿಪಾದಿಸಿದೆ.
ಇಂದಿಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ ಸೇನಾದ ವಕ್ತಾರ ಲೋಕೇಂದ್ರ ಸಿಂಗ್ ಅವರು, ನಾವು ಇತಿಹಾಸವನ್ನು ತಿರುಚುವುದನ್ನು ಸಹಿಸುವುದಿಲ್ಲ. ನಾವು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಮತ್ತೆ ಭೇಟಿಯಾಗಲು ಭನ್ಸಾಲಿ ಎರಡು ದಿನಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ತಾತ್ಕಾಲಿಕವಾಗಿ ಚಿತ್ರದ ಶೂಟಿಂಗ್ ಸ್ಥಗಿತಗೊಳಿಸಲು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಚಿತ್ರದಲ್ಲಿ ರಾಣಿ ಪದ್ಮಾವತಿ (ದೀಪಿಕಾ ಪಡುಕೋಣೆ) ಮತ್ತು ಅಲ್ಲಾವುದ್ದೀನ್ ಖಿಲ್ಜಿ (ರಣವೀರ್ ಸಿಂಗ್) ನಡುವೆ ಪ್ರಣಯ ದೃಶ್ಯಗಳಿವೆ ಎಂದು ಸೇನೆಯು ಆರೋಪಿಸಿದೆ. ಈ ಆರೋಪ ದೃಢಪಟ್ಟಿಲ್ಲ, ಆದರೆ ಭನ್ಸಾಲಿ ತನ್ನ ಚಿತ್ರದಿಂದ ಇಂತಹ ದೃಶ್ಯಗಳನ್ನು ಕೈಬಿಡಬೇಕು ಎಂದು ಸೇನೆ ಆಗ್ರಹಿಸಿದೆ.
ಇತಿಹಾಸದ ಕುರಿತು ತಪ್ಪು ಮಾಹಿತಿಗಳನ್ನು ನೀಡದಂತೆ ನಾವು ಭನ್ಸಾಲಿಯವರಿಗೆ ಎಚ್ಚರಿಕೆ ನೀಡಿದ್ದೆವು. ಚಿತ್ರದ ಶೂಟಿಂಗ್ ನಡೆಯುತ್ತಿರುವ ವಿಚಾರ ನಮಗೆ ಗೊತ್ತಾದಾಗ ಅಲ್ಲಿಗೆ ತೆರಳಿ ಪ್ರತಿಭಟಿಸಿದ್ದೇವೆ ಎಂದು ಸೇನಾದ ನಾಯಕ ನಾರಾಯಣ ಸಿಂಗ್ ತಿಳಿಸಿದರು.
ಘಟನೆಗೆ ಪ್ರತಿಕ್ರಿಯಿಸಿದ ರಾಜಸ್ಥಾನದ ಗೃಹಸಚಿವ ಗುಲಾಬ್‌ಚಂದ್ ಕಟಾರಿಯಾ ಅವರು, ಯಾರೇ ಆದರೂ ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ ಸಿಟ್ಟನ್ನು ತೋರಿಸಬಾರದು. ಪೊಲೀಸರಿಗೆ ದೂರು ನೀಡಿದರೆ ಅವರು ಕ್ರಮ ಕೈಗೊಳ್ಳುತ್ತಾರೆ. ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದರು.







