ವಲಸಿಗರಿಗೆ ಟ್ರಂಪ್ ನಿರ್ಬಂಧ: ಅಮೆರಿಕದ ಐಟಿ ಕ್ಷೇತ್ರದಲ್ಲಿ ಸಂಕಟ

ವಾಷಿಂಗ್ಟನ್, ಜ.29: ಮುಸ್ಲಿಂ ಬಾಹುಳ್ಯದ ದೇಶಗಳಿಂದ ನಿರಾಶ್ರಿತರು ಅಮೆರಿಕಕ್ಕೆ ಆಗಮಿಸದಂತೆ ನಿರ್ಬಂಧ ವಿಧಿಸುವ ಆದೇಶವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವುದು ಅಮೆರಿಕದ ಐಟಿ ಕ್ಷೇತ್ರದ ತಲ್ಲಣಕ್ಕೆ ಕಾರಣವಾಗಿದೆ. ಐಟಿ ಉದ್ಯಮದಲ್ಲಿ ಬಹಳಷ್ಟು ಮಂದಿ ಬೇರೆ ದೇಶಗಳಿಂದ ಆಗಮಿಸಿದ ಮಂದಿ ಇರುವುದು ಇದಕ್ಕೆ ಮುಖ್ಯ ಕಾರಣ.
ಪಾಕಿಸ್ತಾನ, ಅಪ್ಘಾನಿಸ್ತಾನ ಹಾಗೂ ಸೌದಿ ಅರೇಬಿಯಾದ ಬಹಳಷ್ಟು ಮಂದಿ ಇಲ್ಲಿದ್ದಾರೆ. ಈ ನಡೆಯಿಂದ ಐಟಿ ಉದ್ಯಮಕ್ಕೆ ಭಾರೀ ದೊಡ್ಡ ಹೊಡೆತದ ಸಾಧ್ಯತೆ ಇಲ್ಲವಾದರೂ, ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಝುಕೆರ್‌ಬರ್ಗ್ ಹಾಗೂ ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಟೀಕಿಸಿದ್ದಾರೆ. ಇದರ ವಿಸ್ತೃತ ಪರಿಣಾಮಗಳ ಬಗ್ಗೆ ಹಲವು ಮಂದಿ ಸಂಸದರು ಹಾಗೂ ನಾಗರಿಕ ಹಕ್ಕು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಗೂಗಲ್ ಈಗಾಗಲೇ ಬೇರೆ ದೇಶಗಳಿಂದ ಬಂದ ಎಲ್ಲ ತನ್ನ ಉದ್ಯೋಗಿಗಳನ್ನು ವಿದೇಶ ಪ್ರವಾಸಗಳಿಂದ ವಾಪಾಸು ಕರೆಸಿಕೊಂಡಿದೆ. ಟ್ರಂಪ್ ಆದೇಶದ ಬಳಿಕ ಬಹಳಷ್ಟು ದೇಶಗಳಲ್ಲಿ ಅಮೆರಿಕಕ್ಕೆ ಹೊರಟಿದ್ದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.
ಇರಾಕ್, ಸಿರಿಯಾ, ಇರಾನ್, ಸೂಡಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮನ್ ದೇಶಗಳ ನಿರಾಶ್ರಿತರ ಆಗಮನವನ್ನು 120 ದಿನಗಳ ವರೆಗೆ ನಿರ್ಬಂಧಿಸಲಾಗಿದೆ. ಸಿರಿಯಾ ವಿಚಾರದಲ್ಲಿ ಅನಿರ್ದಿಷ್ಟಾವಧಿ ನಿಷೇಧ ಹೇರಲಾಗಿದೆ.







