ಆರೋಗ್ಯ ಕ್ಷೇತ್ರದ ಖಾಸಗೀಕರಣಕ್ಕೆ ಅಮರ್ತ್ಯ ಸೇನ್ ಆಕ್ರೋಶ

ಮುಂಬೈ, ಜ.29: ಕೈಗೆಟುಕುವ ದರದಲ್ಲಿ ಆರೋಗ್ಯ ಸೌಲಭ್ಯವನ್ನು ಒದಗಿಸಲು ಸರಕಾರಗಳು ವಿಫಲವಾಗಿದ್ದರೂ, ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗದಿರುವುದು ವಿಷಾದನೀಯ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಅಭಿಪ್ರಾಯಪಟ್ಟರು.
"ಎಲ್ಲರಿಗೂ ಆರೋಗ್ಯ ಸುರಕ್ಷೆ- ಏಕೆ ಮತ್ತು ಹೇಗೆ" ಎಂಬ ವಿಷಯದ ಬಗ್ಗೆ ಟಾಟಾ ಸ್ಮಾರಕ ಕೇಂದ್ರದ ಪ್ಲಾಟಿನಂ ಜ್ಯುಬಿಲಿ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದ ಖಾಸಗೀಕರಣ ಹೆಚ್ಚುತ್ತಿರುವುದನ್ನು ಕಟುವಾಗಿ ಟೀಕಿಸಿದರು. ಬಡವರ ಶೋಷಣೆ ತಪ್ಪಬೇಕು ಎಂದು ಆಗ್ರಹಿಸಿದರು.
ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಜ್ಞಾನ ವಿಭಾಗದ ಪ್ರೊಫೆಸರ್ ಆಗಿರುವ ಸೇನ್, ಭಾರತದ ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಹಸ್ತಕ್ಷೇಪ ಹೆಚ್ಚುತ್ತಿದೆ. ಇದು ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವ ಏಳುಪಟ್ಟು ಅಧಿಕವಾಗಿದೆ. ಇಷ್ಟಾಗಿಯೂ ಗುಣಮಟ್ಟ ದೊಡ್ಡ ಸಮಸ್ಯೆ ಎಂದು ಹೇಳಿದರು. ಜಾರ್ಖಂಡ್‌ನ ಒಂದು ಉದಾಹರಣೆ ನೀಡಿದ ಅವರು, ಮಲೇರಿಯಾ ರೋಗಿಗಳಿಗೆ ಸಲೈನ್ ಇಂಜೆಕ್ಷನ್ ನೀಡುವ ಮೂಲಕ ಅವರಿಗೆ ಚೈತನ್ಯ ನೀಡಲಾಗುತ್ತಿದೆ. ಆದರೆ ಅದು ತೀವ್ರವಾದಾಗ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಭಾರತದ ಆರೋಗ್ಯ ಕ್ಷೇತ್ರ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುವ ಬದಲು ತಳದಿಂದ ಮೊದಲನೇ ಸ್ಥಾನ ಹೊಂದಿದೆ. ನೇಪಾಳ, ಬಾಂಗ್ಲಾದೇಶದಂಥ ದೇಶಗಳು ಭಾರತಕ್ಕಿಂತ ಕಡಿಮೆ ತಲಾದಾಯ ಹೊಂದಿದ್ದರೂ, ಭಾರತಕ್ಕೆ ಹೋಲಿಸಿದರೆ ಹಲವು ಸಾಮಾಜಿಕ ಮಾನದಂಡಗಳಲ್ಲಿ ನಮಗಿಂತ ಮುಂದಿವೆ. ಆರೋಗ್ಯ ಮಾನದಂಡದಲ್ಲಿ ಭಾರತ, ಪಾಕಿಸ್ತಾನಕ್ಕಿಂತ ಮಾತ್ರ ಮುಂದಿದೆ ಎಂದು ಹೇಳಿದರು.







