ಮಸೀದಿಗೆ ಕಲ್ಲೆಸೆದು ಪರಾರಿ: ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಉಡುಪಿ, ಜ.29: ಆದಿಉಡುಪಿಯ ನೂರುಲ್ ಇಸ್ಲಾಮ್ ಮಸೀದಿಗೆ ಜ.28ರಂದು ಮಧ್ಯರಾತ್ರಿ ವೇಳೆ ಅಪರಿಚಿತ ಕಿಡಿಗೇಡಿಯೊಬ್ಬ ಕಿಟಕಿಗಳ ಗಾಜುಗಳಿಗೆ ಕಲ್ಲು ಎಸೆದು ಹಾನಿಗೊಳಿಸಿ ಪರಾರಿಯಾಗಿದ್ದು, ಈ ದೃಶ್ಯ ಮಸೀದಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾತ್ರಿ 12.14ರ ಸುಮಾರಿಗೆ ಮಸೀದಿಯ ಗೇಟಿನಿಂದ ಕಲ್ಲನ್ನು ಕೈಯಲ್ಲಿ ಹಿಡಿದುಕೊಂಡ ಬಂದ ಸುಮಾರು 30ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮಸೀದಿಯ ಮುಖ್ಯದ್ವಾರದ ಎರಡು ಬದಿಯ ಕಿಟಕಿಗಳಿಗೆ ಲ್ಲೆಸೆದು ಗಾಜನ್ನು ಪುಡಿಗೈದನು.
ಬಳಿಕ ಆತ ಅಲ್ಲಿಂದ ಹೊಗರಡೆ ಓಡಿ ಹೋಗಿ ರಸ್ತೆ ಬದಿ ನಿಲ್ಲಿಸಿದ ಬೈಕಿ ನಲ್ಲಿ ಮಲ್ಪೆ ಕಡೆಗೆ ಪರಾರಿಯಾದನು. ಕಿಡಿಗೇಡಿ ಕೇಸರಿ ಬಣ್ಣದ ಶರ್ಟ್ ಹಾಗೂ ತ್ರೀಫೋರ್ತ್ ಪ್ಯಾಂಟ್ ಧರಿಸಿದ್ದನು. ಈ ಎಲ್ಲ ದೃಶ್ಯಗಳು ಮಸೀದಿ ಯಲ್ಲಿ ಅಳವಡಿಸಲಾದ ಎರಡು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದು ಬೆಳಗ್ಗೆ 5.15ರ ಸುಮಾರಿಗೆ ಮಸೀದಿಗೆ ಆಝಾನ್ ಕೊಡಲು ಬಂದ ಧರ್ಮಗುರುವಿಗೆ ಈ ವಿಚಾರ ತಿಳಿದುಬಂತು.
ಇದೇ ವ್ಯಕ್ತಿ ರಾತ್ರಿ ವೇಳೆ ಮಸೀದಿ ಮುಂದಿನ ರಸ್ತೆಯಲ್ಲಿ ತಿರುಗಾಡುತ್ತಿರುವುದನ್ನು ಸ್ಥಳೀಯರು ನೋಡಿದ್ದಾರೆನ್ನಲಾಗಿದೆ. ಈತನನ್ನು ಕಾರೊಂದರಲ್ಲಿ ಮಸೀದಿಯ ಮುಂದೆ ಇಳಿಸಿ ಹೋಗಿರುವುದನ್ನು ಕಂಡಿದ್ದು, ಕೃತ್ಯ ಎಸಗಿದ ಬಳಿಕ ಆತ ಅಲ್ಲೇ ಇದ್ದ ಬೈಕಿನಲ್ಲಿ ಪರಾರಿಯಾಗಿರುವುದಾಗಿ ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ.
ಇದು ಮೂರನೆ ದಾಳಿ:
ಸುಮಾರು 20ವರ್ಷಗಳ ಹಿಂದೆ ಇಲ್ಲಿನ ಹಳೆಯ ಮಸೀದಿಯ ಮೇಲೆ ಕಿಡಿಗೇಡಿಗಳು ರಾತ್ರಿ ಹೊತ್ತು ಕಲ್ಲು ತೂರಾಟ ಮಾಡಿ ಹಾನಿ ಎಸಗಿದ್ದರು. ನಂತರ ಸುಮಾರು 10ವರ್ಷಗಳ ಹಿಂದೆ ರಾತ್ರಿ ಹೊತ್ತು ಹೊಸ ಮಸೀದಿಯ ಮೂರು ನಾಲ್ಕು ಗಾಜುಗಳಿಗೆ ಕಲ್ಲೆಸೆದು ಹಾನಿ ಮಾಡಲಾಗಿತ್ತು. ಈ ಎರಡು ಪ್ರಕಣದ ಆರೋಪಿಗಳ ಬಂಧನವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮಸೀದಿಯ ಸುತ್ತ ಸಿಸಿಟಿವಿಯನ್ನು ಅಳವಡಿಸಲಾಗಿತ್ತು. ಆದರೂ ಇದೀಗ ನಿನ್ನೆ ಮೂರನೆ ದಾಳಿ ನಡೆದಿದೆ. ಆರೋಪಿಯ ಎಲ್ಲ ಗುರುತುಗಳು ಇರುವ ದೃಶ್ಯ ಇರುವುದರಿಂದ ಕೂಡಲೇ ಬಂಧಿಸಿ ಆತನ ಹಿಂದೆ ಇರುವ ಶಕ್ತಿಯನ್ನು ಬಯಲಿಗೆ ಎಳೆಯಬೇಕು ಎಂದು ಸ್ಥಳೀಯರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ತಂಡ ರಚನೆ
‘ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚಲು ಉಡುಪಿ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ದನ್ ತಿಳಿಸಿದ್ದಾರೆ.
ಉಡುಪಿ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರು ಹಾಗೂ ಮಣಿಪಾಲ ಪೊಲೀಸ್ ನಿರೀಕ್ಷಕರ ಮೂರು ತಂಡ ಆರೋಪಿಯ ಶೋಧ ಕಾರ್ಯ ನಡೆಸುತ್ತಿದೆ. ಈಗಾಗಲೇ ಸಿಸಿಟಿವಿಯಲ್ಲಿ ಸೆರೆಯಾಗಿರುವ ವ್ಯಕ್ತಿಯ ಫೋಟೋ ವನ್ನು ಬೇರೆ ಬೇರೆ ಠಾಣೆಗಳಿಗೆ ಕಳುಹಿಸಿ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಸದ್ಯಕ್ಕೆ ಇದರಲ್ಲಿ ಒಬ್ಬ ಭಾಗಿಯಾಗಿರುವಂತೆ ಕಂಡುಬರುತ್ತಿದ್ದು, ಮುಂದೆ ತನಿಖೆಯಿಂದ ಎಲ್ಲ ವಿಚಾರ ತಿಳಿಯಬೇಕಾಗಿದೆ ಎಂದು ಅವರು ಹೇಳಿದರು.







