ವಲಸಿಗರ ಗಡಿಪಾರಿಗೆ ನ್ಯಾಯಾಲಯ ತಡೆಯಾಜ್ಞೆ
ಟ್ರಂಪ್‌ರ ವಲಸಿಗ ನಿಷೇಧ ಆದೇಶಕ್ಕೆ ತಾತ್ಕಾಲಿಕ ಹಿನ್ನಡೆ

ನ್ಯೂಯಾರ್ಕ್, ಜ. 29: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಲಸೆ ನಿಷೇಧ ಆದೇಶದ ಒಂದು ಭಾಗಕ್ಕೆ ಫೆಡರಲ್ ನ್ಯಾಯಾಲಯವೊಂದು ಶನಿವಾರ ತಡೆ ನೀಡಿದೆ. ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡಿರುವ ನಿರಾಶ್ರಿತರು ಮತ್ತು ಇತರ ಪ್ರಯಾಣಿಕರನ್ನು ಗಡಿಪಾರು ಮಾಡುವುದನ್ನು ನಿಲ್ಲಿಸುವಂತೆ ಅದು ಅಧಿಕಾರಿಗಳಿಗೆ ಆದೇಶ ನೀಡಿದೆ.
ಸರಕಾರದ ಆದೇಶವನ್ನು ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
ಅಮೆರಿಕದ ಜಿಲ್ಲಾ ನ್ಯಾಯಾಧೀಶೆ ಆ್ಯನ್ ಡಾನೆಲಿ ತೀರ್ಪು ನೀಡಿದ ಬಳಿಕ, ‘ಜಯ ನಮ್ಮದೇ’ ಎಂಬುದಾಗಿ ಯೂನಿಯನ್ ಟ್ವೀಟ್ ಮಾಡಿದೆ.
ಟ್ರಂಪ್‌ರ ಆದೇಶ ನಿರಾಶ್ರಿತರು ಅಮೆರಿಕಕ್ಕೆ ಬರುವುದನ್ನು ಕನಿಷ್ಠ 120 ದಿನಗಳ ಕಾಲ ಹಾಗೂ ಏಳು ಮುಸ್ಲಿಮ್ ಪ್ರಾಬಲ್ಯದ ದೇಶಗಳ ಪ್ರಯಾಣಿಕರಿಗೆ ವೀಸಾ ನೀಡುವುದನ್ನು ಮುಂದಿನ ಮೂರು ತಿಂಗಳ ಕಾಲ ನಿಷೇಧಿಸುತ್ತದೆ.
ಟ್ರಂಪ್‌ರ ಆದೇಶ ಹೊರಬಿದ್ದ ಬಳಿಕ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಡಝನ್‌ಗಟ್ಟಳೆ ಪ್ರಯಾಣಿಕರನ್ನು ಬಂಧಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಹೊರಬಿದ್ದಿದೆ.
ಎಷ್ಟು ಜನ ಸಂತ್ರಸ್ತರಾಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಆದರೆ, ಸರಕಾರಿ ಆದೇಶ ಹೊರಬಿದ್ದ ಬಳಿಕ, ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಬಂಧಿಸಲ್ಪಟ್ಟ ಎಲ್ಲರ ಪಟ್ಟಿಯನ್ನು ನೀಡುವಂತೆ ನ್ಯಾಯಾಧೀಶರು ಸರಕಾರಕ್ಕೆ ಆದೇಶಿಸಿದರು.
ಕ್ರಮಬದ್ಧ ವೀಸಾಗಳೊಂದಿಗೆ ಇರಾಕ್, ಸಿರಿಯ, ಇರಾನ್, ಸುಡಾನ್, ಲಿಬಿಯ, ಸೊಮಾಲಿಯ ಮತ್ತು ಯಮನ್‌ಗಳಿಂದ ಬರುವ ಯಾರನ್ನೇ ಆದರೂ ಗಡಿಪಾರುಗೊಳಿಸದಂತೆ ಅಮೆರಿಕದ ಗಡಿ ಏಜಂಟ್‌ಗಳಿಗೆ ನ್ಯಾಯಾಲಯ ಆದೇಶ ನೀಡಿದೆ.
‘‘ಟ್ರಂಪ್‌ರ ಆದೇಶದ ಹಿನ್ನೆಲೆಯಲ್ಲಿ ಈ ಪ್ರಯಾಣಿಕರನ್ನು ಅವರ ತವರು ದೇಶಗಳಿಗೆ ವಾಪಸ್ ಕಳುಹಿಸುವುದು ಅವರನ್ನು ಸರಿಪಡಿಸಲಾಗದಷ್ಟು ಘಾಸಿಗೊಳಿಸುತ್ತದೆ’’ ಎಂದು ತನ್ನ ತೀರ್ಪಿನಲ್ಲಿ ನ್ಯಾಯಾಧೀಶೆ ಡಾನೆಲಿ ಹೇಳಿದ್ದಾರ
ವಿಮಾನ ನಿಲ್ದಾಣಗಳಲ್ಲಿ ಪ್ರತಿಭಟನೆ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಲಸಿಗ ನಿಷೇಧ ಆದೇಶದ ವಿರುದ್ಧ ಅಮೆರಿಕದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 2,000 ಮಂದಿ ಪ್ರದರ್ಶನಕಾರರು ಪ್ರತಿಭಟನೆ ನಡೆಸಿದರು.ವಾಶಿಂಗ್ಟನ್, ಶಿಕಾಗೊ, ಮಿನಪೊಲಿಸ್, ಡೆನ್ವರ್, ಲಾಸ್‌ಏಂಜಲಿಸ್, ಸಾನ್‌ಫ್ರಾನ್ಸಿಸ್ಕೊ ಮತ್ತು ಡಲ್ಲಾಸ್ ವಿಮಾನ ನಿಲ್ದಾಣಗಳಲ್ಲೂ ಪ್ರತಿಭಟನೆಗಳು ನಡೆದವು.







