ಬಾಣಂತಿ,ಶಿಶು ಮರಣ ಪ್ರಮಾಣದಲ್ಲಿ ತೀವ್ರ ಕುಸಿತ: ಸಚಿವ ನಡ್ಡಾ

ಮುಂಬೈ,ಜ.29: ಹಾಲಿ ಸರಕಾರವು ಕೈಗೊಂಡ ವಿವಿಧ ಆರೋಗ್ಯ ಪಾಲನಾ ಯೋಜನೆಗಳು ಹಾಗೂ ಜಾಗೃತಿ ಕಾರ್ಯಕ್ರಮಗಳಿಂದಾಗಿ ಭಾರತದಲ್ಲಿ ಬಾಣಂತಿ ಹಾಗೂ ಶಿಶು ಮರಣ ಪ್ರಮಾಣದಲ್ಲಿ ತೀವ್ರ ಕುಸಿತವುಂಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದ್ದಾರೆ.
2005 ಹಾಗೂ 2015ರಲ್ಲಿ ಬಿಡುಗಡೆಗೊಳಿಸಲಾದ ಮಾದರಿ ನೋಂದಣಿ ವ್ಯವಸ್ಥೆಯ ವರದಿಯು ದೇಶದಲ್ಲಿ ಬಾಣಂತಿಯರು ಹಾಗೂ ಶಿಶು ಮರಣ ಪ್ರಮಾಣ ಕುಸಿದಿರುವುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ನೂತನ ಸರಕಾರವು ಜಾರಿಗೊಳಿಸಿದ ವಿವಿಧ ಕಾರ್ಯಕ್ರಮಗಳ ಪರಿಣಾಮ ಇದಾಗಿದೆ ಎಂದವರು ತಿಳಿಸಿದ್ದಾರೆ. ಮುಂಬೈ ಟಾಟಾ ಸ್ಮಾರಕ ಕೇಂದ್ರವು ರವಿವಾರ ಆಯೋಜಿಸಿದ ‘‘ ಆರೋಗ್ಯಪಾಲನೆ: ಸಾಮಾಗ್ರಿ ಅಥವಾ ಮೂಲಭೂತ ಮಾನವ ಅವಶ್ಯಕತೆ’ ಕುರಿತ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
‘‘ದೇಶಾದ್ಯಂತ ನಾವು ರೋಗ ನಿರೋಧತೆಯ ಪ್ರಮಾಣವನ್ನು ಹೆಚ್ಚಿಸಿದ್ದೇವೆ. ಆರೋಗ್ಯಪಾಲನೆ, ಆರೋಗ್ಯ ಕಾರ್ಯಕರ್ತರ ಸಬಲೀಕರಣದಂತಹ ಕ್ರಮಗಳು ಸರಕಾರ ಪ್ರಯತ್ನಗಳನ್ನು ಬೆಂಬಲಿಸುತ್ತಿವೆ. ಈ ಎಲ್ಲಾ ಕ್ರಮಗಳು ಸಮಾಜಕ್ಕೆ ಪ್ರಯೋಜನಕಾರಿಯಾಗಿವೆ’’ ಎಂದು ಸಚಿವರು ತಿಳಿಸಿದ್ದಾರೆ.
ಬಾಣಂತಿರು ಹಾಗೂ ಐದು ವರ್ಷಕ್ಕಿಂತ ಕೆಳಗಿನ ಶಿಶುಗಳ ಮರಣಪ್ರಮಾಣವು ಜಾಗತಿಕ ಸರಾಸರಿಗಿಂತ ಅಧಿಕ ವೇಗದಲ್ಲಿ ತಗ್ಗಿದೆ. ಒಟ್ಟು ಪ್ರಜನನ ದರದಲ್ಲೂ ಗಣನೀಯ ಕುಸಿತವುಂಟಾಗಿದೆ ಎಂದು ನಡ್ಡಾ ಹೇಳಿದ್ದಾರೆ.
ನಮ್ಮ ದೇಶವು ಸೋಂಕು ಹಾಗೂ ಸೋಂಕುರಹಿತ ರೋಗಗಳ ಅವಳಿ ಹೊರೆಯನ್ನು ಎದುರಿಸುತ್ತಿದೆ. ಕಳೆದ ಶತಮಾನದಲ್ಲಿ ದೇಶವು ಸೋಂಕುರೋಗಗಳು ವ್ಯಾಪಕವಾಗಿದ್ದರೆ, ಪ್ರಸ್ತುತ ಅದು ಸೋಂಕುರಹಿತ ರೋಗಗಳ ಸವಾಲನ್ನು ಎದುರಿಸುತ್ತಿದೆ ಎಂದರು. ಕ್ಯಾನ್ಸರ್ ನಿಯಂತ್ರಣವು ದೇಶಕ್ಕೆ ಎದುರಾದ ಅತಿ ದೊಡ್ಡ ಸವಾಲಾಗಿದೆ ಎಂದು ನಡ್ಡಾ ಆತಂಕ ವ್ಯಕ್ತಪಡಿಸಿದರು.







