ದೇಶೀಯ ವಲಸಿಗರಿಗೆ ಪರ್ಯಾಯ ಮತದಾನದ ಹಕ್ಕು ಅಸಾಧ್ಯ : ಚುನಾವಣಾ ಆಯೋಗ

ಹೊಸದಿಲ್ಲಿ, ಜ.29: ಸಾಗರೋತ್ತರದ ಭಾರತೀಯರಿಗೆ ಮತ್ತು ಸೇವೆಯಲ್ಲಿರುವ ಮತದಾರರಿಗೆ ಇರುವಂತೆ, ದೇಶೀಯ ವಲಸಿಗರಿಗೆ ಕೂಡಾ ಪರ್ಯಾಯ ಮತದಾನದ ಹಕ್ಕು ನೀಡಲು ಈಗ ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಇಂತಹ ವಲಸಿಗರ ಚಲನವಲನವನ್ನು ಪತ್ತೆಹಚ್ಚಲು ಕಷ್ಟಸಾಧ್ಯವಾಗಿರುವ ಕಾರಣ ಇ-ಬ್ಯಾಲೆಟ್ ಇತ್ಯಾದಿ ವ್ಯವಸ್ಥೆಗಳ ಮೂಲಕ ಅವರಿಗೆ ಪರ್ಯಾಯ ಮತದಾನದ ಅವಕಾಶ ಮಾಡಿಕೊಡಲು ಅಸಾಧ್ಯವಾಗಿದೆ ಎಂದು ಆಯೋಗದ ಸಮಿತಿಯೊಂದು ವರದಿ ನೀಡಿದೆ. ದೇಶೀಯ ವಲಸಿಗರು ತಾವು ಉದ್ಯೋಗದಲ್ಲಿರುವ ಸ್ಥಳದಲ್ಲೇ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸಮಿತಿ ಸಲಹೆ ಮಾಡಿದೆ. ಈ ಕುರಿತಾದ ನಿಯಮಗಳು ತುಂಬಾ ಸರಳವಾಗಿವೆ. ಓರ್ವ ವ್ಯಕ್ತಿ ಹೊಸ ವಿಳಾಸಕ್ಕೆ ಸ್ಥಳಾಂತರ ಹೊಂದಿದೊಡನೆ ಅಲ್ಲಿ ಆತ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳು ಸಾಧ್ಯವಿದೆ ಎಂದು ತಿಳಿಸಿದೆ.
ಶಕ್ತಿಶಾಲಿ ಮತ್ತು ಉತ್ತಮ ದತ್ತಾಂಶ ಮಾಹಿತಿ ಲಭ್ಯವಾದರೆ ಆಗ ಪರ್ಯಾಯ ಮತದಾನದ ಹಕ್ಕು ನೀಡುವ ಬಗ್ಗೆ ನಿರ್ಧರಿಸಬಹುದು . ಪರ್ಯಾಯ ಮತದಾನದ ಹಕ್ಕಿನ ಕುರಿತು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಹಿನ್ನೆಲೆಯಲ್ಲಿ ಈ ವರದಿಯನ್ನು ಕೇಂದ್ರ ಸರಕಾರಕ್ಕೆ ಮತ್ತು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಪ್ರಜಾ ಪ್ರಾತಿನಿಧ್ಯ ಕಾಯ್ದೆ 1950ರ 20ನೇ ಪರಿಚ್ಛೇದದಡಿ ‘ಸಾಮಾನ್ಯ ನಾಗರಿಕ’ ಪದಕ್ಕೆ ನೀಡಿರುವ ವ್ಯಾಖ್ಯಾನ ಮತ್ತು ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ 60ನೇ ಪರಿಚ್ಛೇದಡಿ ನೀಡಲಾದ ‘ಕೆಲ ವರ್ಗದ ಜನರು ಮತದಾನ ಮಾಡಲು ಇರುವ ವಿಶೇಷ ಪ್ರಕ್ರಿಯೆ ’ ಎಂಬ ವ್ಯಾಖ್ಯಾನಗಳಿಗೆ ತಿದ್ದುಪಡಿ ತಂದ ಬಳಿಕವಷ್ಟೇ ಪರ್ಯಾಯ ಮತದಾನದ ಹಕ್ಕು ನೀಡುವ ಬಗ್ಗೆ ನಿರ್ಧರಿಸಲು ಸಾಧ್ಯ ಎಂದು ಸಮಿತಿ ತಿಳಿಸಿದೆ.
ಸಾಗರೋತ್ತರದ ಭಾರತೀಯರಿಗೆ ಪರ್ಯಾಯ ಮತದಾನದ ಹಕ್ಕು ನೀಡಿರುವ ಕೇಂದ್ರ ಸರಕಾರ, ದೇಶೀಯ ವಲಸಿಗರನ್ನು ಈ ಹಕ್ಕಿನಿಂದ ವಂಚಿಸಿದೆ ಎಂದು 2015ರಲ್ಲಿ ಹಲವು ರಾಜ್ಯಸಭಾ ಸದಸ್ಯರು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಈ ಸಾಧ್ಯತೆಯ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅಂತರ್ ಸಚಿವಾಲಯ ತಂಡವೊಂದಕ್ಕೆ ಪ್ರಧಾನಮಂತ್ರಿಯವರ ಕಾರ್ಯಾಲಯ ಸೂಚಿಸಿತ್ತು.
ಸಾಗರೋತ್ತರದ ಭಾರತೀಯರಿಗೆ ಬದಲಿ ಮತದ (ಪ್ರಾಕ್ಸಿ ಓಟ್) ಮತ್ತು ಇ-ಪೋಸ್ಟಲ್ ಬ್ಯಾಲೆಟ್ ಮತದಾನದ ಅವಕಾಶ ನೀಡುವ ಕರಡು ಮಸೂದೆಯನ್ನು ಜನವರಿ 24ರಂದು ಸಂಪುಟ ಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ಈ ಬಗ್ಗೆ ನಿರ್ಧಾರವನ್ನು ಸಂಪುಟ ಸಭೆಯು ಮುಂದೂಡಿತ್ತು.







