ಕಂಬಳ ಬೆಂಬಲಿಸಿ ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ

ಬೆಂಗಳೂರು, ಜ.29: ದಕ್ಷಿಣ ಕನ್ನಡದ ಸಾಂಸ್ಕೃತಿಕ ಕ್ರೀಡೆಯಾದ ಕಂಬಳ ಆಚರಣೆಗೆ ಅವಕಾಶ ಕಲ್ಪಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯಧಾನಿ ಕಂಬಳ ಕ್ರೀಯಾಶೀಲ ಸಮಿತಿ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೂರಾರು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕಂಬಳವನ್ನು ಬೆಂಬಲಿಸಿ, ಕಂಬಳ ನಮ್ಮ ಹಕ್ಕು ಎಂದು ಆಗ್ರಹಿಸಿ ಬೈಕ್ ಹಾಗೂ ಇತರೆ ವಾಹನಗಳ ಮೂಲಕ ರ್ಯಾಲಿ ಭಾಗವಹಿಸಿ ಸರಕಾರ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ನಾಗರಾಜ್, ಕಂಬಳ ನಮ್ಮ ನಾಡಿನ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಅದನ್ನು ನಿಲ್ಲುಸುವುದು ಅಸಾಧ್ಯ. ಒಂದು ವೇಳೆ ಕಂಬಳಕ್ಕೆ ಸರಕಾರ ಅನುಮತಿ ನೀಡಲಿಲ್ಲ ಎಂದಾದರೆ ಜೈಲಿಗೆ ಹೋದರು ಪರವಾಗಿಲ್ಲ, ನಾವು ಕಂಬಳವನ್ನು ಆಚರಿಸುತ್ತೇವೆ. ಕಂಬಳ ಆಚರಣೆಗೆ ಕನ್ನಡ ಸಂಘಟನೆಗಳ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರಮೋದಿ ಜಲ್ಲಿಕಟ್ಟಿಗೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಅಲ್ಲಿನ ಸಂಸದರ ಒತ್ತಡಕ್ಕೆ ಮಣಿದು ಜಲ್ಲಿಕಟ್ಟು ಆಚರಣೆಗೆ ಸುಗ್ರೀವಾಜ್ಞೆ ಹೊರಡಿಸಲು ಸಹಕರಿಸಿದ್ದಾರೆ. ಆದರೆ, ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತಿದ್ದಾರೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದ ಅವರು, ಯಾವುದೇ ಕಾರಣಕ್ಕೂ ಕಂಬಳ ನಿಲ್ಲಬಾರದು, ನಡೆಯಲೇಬೇಕು ಎಂದು ಆಗ್ರಸಿದರು.
ಚಿತ್ರನಟ ಹಾಗೂ ಸಂಗೀತ ನಿರ್ದೇಶಕ ಮನೋಹರ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಕಂಬಳಕ್ಕೂ, ತಮಿಳುನಾಡಿನ ಜಲ್ಲಿಕಟ್ಟಿಗೂ ಸಾಕಷ್ಟು ವ್ಯತ್ಯಾಸದೆ. ಅಲ್ಲಿ ಪ್ರಾಣಿ ಹಿಂಸೆ ಇದೆ. ಆದರೆ, ಕಂಬಳದಲ್ಲಿ ಪ್ರಾಣಿ ಹಿಂಸೆ ಇಲ್ಲ. ಆದರೂ ಸುಪ್ರೀಂಕೋರ್ಟ್ ಕಂಬಳಕ್ಕೆ ನಿಷೇಧ ಹೇರಿದೆ. ನಾಳೆ ಬರಲಿರುವ ಕಂಬಳ ಕುರಿತಾದ ತೀರ್ಪು ನಮ್ಮ ಪರವಾಗಿ ಹೊರಬೀಳಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಎ.ಪ್ರಕಾಶ್ ಹೆಗ್ಡೆ, ರಾಘವೇಂದ್ರ ಶೆಟ್ಟಿ, ಚಂದ್ರಹಾಸ ರೈ, ರಾಧಾಕೃಷ್ಣ ಹೊಳ್ಳ, ಷಣ್ಮುಗಪ್ಪ, ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ಸಾ.ರಾ.ಗೊವೀಂದು, ಗಿರೀಶ್ ಗೌಡ ಸೇರಿದಂತೆ ಇನ್ನಿತರ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸಾರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







