ಟ್ರಂಪ್ ಉದ್ಯಮ ಹೊಂದಿರುವ ದೇಶಗಳಿಗೆ ನಿಷೇಧವಿಲ್ಲ !

ವಾಶಿಂಗ್ಟನ್, ಜ. 29: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೊರಡಿಸಿದ ಸರಕಾರಿ ಆದೇಶವೊಂದರಲ್ಲಿ, ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ಪ್ರಜೆಗಳು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸಿದ್ದಾರೆ. ಆದರೆ, ಅವರು ಉದ್ಯಮಗಳನ್ನು ಹೊಂದಿರುವ ಮುಸ್ಲಿಂ ದೇಶಗಳ ಪೈಕಿ ಕೆಲವು ಭಯೋತ್ಪಾದನೆ ಪೀಡಿತವಾಗಿದ್ದರೂ, ಅವುಗಳು ನಿಷೇಧಿತ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ನಿಷೇಧಕ್ಕೊಳಗಾಗಿರುವ ಇರಾನ್, ಇರಾಕ್, ಸಿರಿಯ, ಯಮನ್, ಸೊಮಾಲಿಯ, ಸುಡಾನ್ ಮತ್ತು ಲಿಬಿಯ ದೇಶಗಳಲ್ಲಿ ಟ್ರಂಪ್ ಯಾವುದೇ ವ್ಯಾಪಾರಿ ಹಿತಾಸಕ್ತಿ ಹೊಂದಿಲ್ಲ ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಆದರೆ, ಈಜಿಪ್ಟ್ ಮುಂತಾದ ಪ್ರಭಾವಶಾಲಿ ಹಾಗೂ ಶ್ರೀಮಂತ ಮುಸ್ಲಿಮ್ ಬಾಹುಳ್ಯದ ದೇಶಗಳ ತಂಟೆಗೆ ಶ್ವೇತಭವನ ಹೋಗಿಲ್ಲ.
ತನ್ನ ಸ್ವಂತ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ನಿಯಮಗಳನ್ನು ರೂಪಿಸಿದರೆ ಎಂಬ ಪ್ರಶ್ನೆಗಳು ಏಳುತ್ತಿವೆ.
‘‘ಅವರು ತನ್ನ ಉದ್ಯಮಗಳನ್ನು ಕುಟುಂಬದ ಹೊರಗೆ ಮಾರಾಟಮಾಡಬೇಕು ಹಾಗೂ ಸೊತ್ತುಗಳನ್ನು ಬ್ಲೈಂಡ್ ಟ್ರಸ್ಟ್‌ನಲ್ಲಿ ಇಡಬೇಕು. ಇಲ್ಲದಿದ್ದರೆ, ಅವರು ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುವಾಗಲೂ, ಅಮೆರಿಕದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಈ ನಿರ್ಧಾರ ತೆಗೆದುಕೊಂಡಿದ್ದಾರೋ ಅಥವಾ ಸ್ವಂತ ಹಿತಾಸಕ್ತಿಯನ್ನೋ ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಾರೆ’’ ಎಂದು ವಾಶಿಂಗ್ಟನ್‌ನ ‘ಸಿಟಿಜನ್ಸ್ ಫಾರ್ ರೆಸ್ಪಾನ್ಸಿಬಿಲಿಟಿ ಆ್ಯಂಡ್ ಎತಿಕ್ಸ್’ ಸಂಘಟನೆಯ ವಕ್ತಾರ ಜೋರ್ಡಾನ್ ಲಿಬೋಯಿಝ್ ಹೇಳುತ್ತಾರೆ.
ಟ್ರಂಪ್‌ರ ನಿಷೇಧಿತ ದೇಶಗಳ ಪಟ್ಟಿಯಲ್ಲಿ ಟರ್ಕಿ ಇಲ್ಲ. ಅಲ್ಲಿನ ಎರಡು ವೈಭವೋಪೇತ ಹೊಟೇಲ್‌ಗಳ ಮಾಲೀಕತ್ವವನ್ನು ಟ್ರಂಪ್ ಹೊಂದಿದ್ದಾರೆ. ಅದೂ ಅಲ್ಲದೆ ಟ್ರಂಪ್ ಬ್ರಾಂಡ್‌ನ ಗೃಹೋಪಕರಣಗಳನ್ನು ಅಲ್ಲಿನ ಕಂಪೆನಿಯೊಂದು ಉತ್ಪಾದಿಸುತ್ತಿದೆ.







