ಅಸರ್ಮಪಕ ಗಸ್ತು ವ್ಯವಸ್ಥೆಯ ವಿರುದ್ಧ ಅಸಮಾಧಾನ
ಎಸ್ಸಿ, ಎಸ್ಟಿ ಮಾಸಿಕ ಸಭೆ

ಮಂಗಳೂರು, ಜ.29: ವಾಹನಗಳ ದಟ್ಟಣೆ, ಅಸಮರ್ಪಕ ಗಸ್ತು ವ್ಯವಸ್ಥೆ, ರಸ್ತೆಗೆ ಹಂಪ್ ಇಲ್ಲದೆ ಅಪಘಾತ, ಕೆಲವು ಟ್ರಾಫಿಕ್ ಪೊಲೀಸರ ಬೇಜವಾಬ್ದಾರಿತನ ಮತ್ತಿತರ ಕುಂದು ಕೊರತೆಗಳ ಕುರಿತು ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪಾಯುಕ್ತ ಡಾ. ಸಂಜೀವ್ ಪಾಟೀಲ್‌ರ ಅಧ್ಯಕ್ಷತೆಯಲ್ಲಿ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಸಿಕ ಎಸ್ಸಿ, ಎಸ್ಟಿ ಸಭೆ ರವಿವಾರ ನಡೆಯಿತು.
ಎಸ್ಸಿ-ಎಸ್ಟಿ ಕಾಲನಿಯ ವಿವೇಕಾನಂದ-ಬಳ್ಳಾಲ್, ಕಂಕನಾಡಿಯ ಕುಕ್ಕೋರಿಗುಡ್ಡ, ಉರ್ವಸ್ಟೋರ್‌ನ ಸುಂಕದಕಟ್ಟೆ ಭಾಗದಲ್ಲಿ ರಾತ್ರಿ ಸಮಯದಲ್ಲಿ ಸಮರ್ಪಕವಾದ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಕೈಗೊಂಡಿಲ್ಲವೆಂದು ವ್ಯಕ್ತಿಯೋರ್ವರು ದೂರು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಡಾ. ಸಂಜೀವ್ ಪಾಟೀಲ್, ‘ಇತ್ತೀಚಿನ ದಿನಗಳಲ್ಲಿ ಗಸ್ತು ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಗಸ್ತು ಪೊಲೀಸರು ಬಾರದಿದ್ದರೆ ತನ್ನ ಗಮನಕ್ಕೆ ತಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಭರವಸೆ ನೀಡಿದರು.
ಪಿಲಿಕುಳದಿಂದ ಬರುವ ವಾಹನಗಳು ವಾಮಂಜೂರು ಜಂಕ್ಷನ್‌ನಲ್ಲಿ ವೇಗವಾಗಿ ಬರುತ್ತವೆ. ಅದೇ ರೀತಿ ಇಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸಿದ್ದ್ದು, ಅಪಾಯಕಾರಿ ಜಂಕ್ಷನ್ ಆಗಿ ಪರಿಣಮಿಸಿದೆ. ಇದರ ಬಗ್ಗೆ ಹಲವಾರು ಬಾರಿ ಮನವಿ, ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಓರ್ವ ವ್ಯಕ್ತಿ ದೂರಿದರು.
ಡಾ. ಸಂಜೀವ್ ಪಾಟೀಲ್ ಉತ್ತರಿಸಿ, ರಸ್ತೆಯಲ್ಲಿ ಹಂಪ್ ಹಾಕುವುದು ಪೊಲೀಸರ ಕೆಲಸವಲ್ಲ. ಅದಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಆರ್‌ಟಿಒಗೆ ಪತ್ರ ಬರೆಯಲಾಗಿದೆ. ಮತ್ತೊಮ್ಮೆ ಪತ್ರ ಬರೆಯಲಾಗುವುದು ಎಂದರು.
ವಾಮಂಜೂರು ಜಂಕ್ಷನ್‌ನಲ್ಲಿ ಮೂವರು ಕಾನ್‌ಸ್ಟೇಬಲ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರಷ್ಟಕ್ಕೆ ಅವರು ಮೊಬೈಲ್‌ನಲ್ಲಿ ತಲ್ಲೀನರಾಗಿರುತ್ತಾರೆ. ವಾಹನಗಳ ದಟ್ಟಣೆಯಾದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ದೂರು ಕೇಳಿ ಬಂತು.
ಇದಕ್ಕೆ ಡಿಸಿಪಿ ಪ್ರತಿಕ್ರಿಯಿಸಿ, ‘ಇಲ್ಲಿ ಟ್ರಾಫಿಕ್ ವಾರ್ಡನ್ ಸಿಸ್ಟಮ್ ಇದೆ. ಆ ಸಿಸ್ಟಮ್‌ಗೆ ನೀವು ಪ್ರತಿನಿಧಿಗಳಾಗಿ ಸೇರಿಕೊಳ್ಳಬಹುದಾಗಿದೆ. 96 ವರ್ಷದ ವ್ಯಕ್ತಿಯೊಬ್ಬರು ಟ್ರಾಫಿಕ್ ವಾರ್ಡನ್ ಸಿಸ್ಟಮ್‌ನ ಮುಂದಾಳತ್ವ ವಹಿಸಿದ್ದಾರೆ. ಇಂತಹ ಸಮಸ್ಯೆಗಳಿಗೆ ಎಲ್ಲರೂ ನಮ್ಮ ಊರು, ನಮ್ಮ ಆಸ್ತಿ ಪಾಸ್ತಿ ಎನ್ನುವ ಭಾವನೆ ಬರಬೇಕಾಗಿದೆ. ಯಾವುದೇ ಪೊಲೀಸರು ಕರ್ತವ್ಯ ನಿರತರಾಗಿದ್ದಾಗ ಅನಾವಶ್ಯಕವಾಗಿ ಮೊಬೈಲ್ ಬಳಸಿದ್ದಾದಲ್ಲಿ ಕಂಟ್ರೋಲ್ ರೂಮ್ (100)ಗೆ ಕರೆ ಮಾಡಿ ತಿಳಿಸಿ ಎಂದು ಹೇಳಿದರು.
ದಲಿತ ಸಂಘಟನೆಯ ಮುಖಂಡರಾದ ಎಂ.ಎ. ನಾಯಕ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.







