‘ಕೊಡಗು ಮುಸ್ಲಿಮ್ ಒಕ್ಕೂಟ’ ವಾಟ್ಸ್‌ಆ್ಯಪ್ ಗ್ರೂಪ್‌ನಿಂದ ವಿನೂತನ ಸಮಾಜ ಸೇವೆ
ವಾಟ್ಸ್‌ಆ್ಯಪ್‌ನಿಂದ ಬಡ ಹೆಣ್ಣುಮಕ್ಕಳ ವಿವಾಹ ಶ್ಲಾಘನೀಯ: ಜಿಪಂ ಅಧ್ಯಕ್ಷ ಅಬ್ದುಲ್ಲತೀಫ್

ಸಿದ್ದಾಪುರ, ಜ.29: ಕೊಡಗು ಮುಸ್ಲಿಮ್ ಒಕ್ಕೂಟ ವಾಟ್ಸ್‌ಆ್ಯಪ್ ಗ್ರೂಪ್ ವತಿಯಿಂದ ಎರಡು ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮ ಇಲ್ಲಿನ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಈ ಸಂದರ್ಭ ಜಿಪಂ ಸದಸ್ಯ ಅಬ್ದುಲ್ಲತೀಫ್ ಮಾತನಾಡಿ, ವಾಟ್ಸ್‌ಆ್ಯಪ್ ಮೂಲಕ ಯುವಕರು ಬಡ ಕುಟುಂಬದ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕು. ದೇವರು ಕೊಟ್ಟಿರುವ ಸಂಪತ್ತನ್ನು ಬಚ್ಚಿಡದೆ ಬಡವರಿಗೆ ಹಾಗೂ ನಿರ್ಗತಿಕರಿಗೆ ನೀಡಿ ಸಹಾಯ ಮಾಡಿದರೆ ಖಂಡಿತ ದೇವರು ನಿಮ್ಮನ್ನು ಕಷ್ಟದಲ್ಲಿ ಸಹಾಯ ಮಾಡುತ್ತಾನೆ ಎಂದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹ್ಸಿನ್ ಮಾತನಾಡಿ, ಸಾಮಾಜಿಕ ಜಾಲತಾಣದ ಮೂಲಕ ಬಡ ಕುಟುಂಬದ ಕೈ ಹಿಡಿದು ಸಹಾಯಕ್ಕೆ ಮುಂದಾಗಿರುವ ಯುವಕರು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುತ್ತಾ ವರದಕ್ಷಿಣೆಯನ್ನು ಕಿತ್ತೊಗೆಯಲು ಯುವಕರು ಪ್ರಯತ್ನಿಸುತ್ತಿದ್ದು, ಇಂತಹ ಕಾರ್ಯಕ್ರಮಗಳು ಇನ್ನೂ ಮೂಡಿ ಬರಲಿ ಎಂದು ಹಾರೈಸಿದರು.
ಎಮ್ಮೆಮಾಡು ಜುಮಾ ಮಸೀದಿಯ ಖತೀಬ್ ಇಸ್ಮಾಯಿಲ್ ಲತೀಫಿ ಹಾಗೂ ಗೋಣಿಕೊಪ್ಪಮಸೀದಿಯ ಖತೀಬ್ ಮುಹಮ್ಮದ್ ಅಲಿ ಫೈಝಿ ನಿಖಾಹ್ ನೇತೃತ್ವ ವಹಿಸಿದರು. ಸಮಸ್ತ ಕೊಡಗು ನಾಯಬ್ ಖಾಝಿ ಎಂ.ಎಂ. ಅಬ್ದುಲ್ಲಾ ಫೈಝಿ ಪ್ರಾರ್ಥನೆ ನಿರ್ವಹಿಸಿದರು. ಕೊಡಗು ಮುಸ್ಲಿಮ್ ಒಕ್ಕೂಟದ ವಾಟ್ಸ್‌ಆ್ಯಪ್ ಗ್ರೂಪ್‌ನ ಅಧ್ಯಕ್ಷ ಕೆ.ಎಚ್. ಮುಹಮ್ಮದ್ ರಾಫಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಹೊಳಮಾಳದ ಶಾಹಿಲ್ ಖಿರಾಹತ್ ಕೊಡಗು ಪಾರಾಯಣ ಮಾಡಿದರು. ಜಮೀಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು. ಸಿದ್ದಾಪುರ ಜುಮಾ ಮಸೀದಿಯ ಖತೀಬ್ ಅಬ್ದು ಸಲಾಂ ಲತೀಫಿ ನಿಖಾಹ್ ಮಹತ್ವದ ಬಗ್ಗೆ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಭದ್ರಾವತಿಯ ಹಾರೂನ್ ಅಲ್ ಬುಖಾರಿ ತಂಙಳ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಸಿದ್ದಾಪುರ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಕೆ.ಉಸ್ಮಾನ್ ಹಾಜಿ, ಕೊಡಗು ಮುಸ್ಲಿಮ್ ಒಕ್ಕೂಟ ವಾಟ್ಸ್ ಆ್ಯಪ್ ಗ್ರೂಪಿನ ಗೌರವಾಧ್ಯಕ್ಷ ನಾಸಿರ್ ಮಕ್ಕಿ, ವೀರಾಜಪೇಟೆ ಅನ್ವಾರುಲ್ ಹುದಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಲಿಯಾಕತ್ ಅಲಿ, ಗೋಣಿಕೊಪ್ಪಶಾಫಿ ಮುಸಿಮ್ ಜಮಾಅತ್ ಸದಸ್ಯ ಪಿ.ಎ. ಹಕೀಂ, ಗೋಣಿಕೊಪ್ಪಗ್ರಾಪಂ ಸದಸ್ಯರಾದ ಪ್ರಮೋದ್ ಗಣಪತಿ, ಸಿ. ಸೋಮಣ್ಣ, ಸಿದ್ದಾಪುರ ಗ್ರಾಪಂ ಸದಸ್ಯರಾದ ಹುಸೈನ್, ಅಬ್ದುಲ್ ಶುಕೂರ್, ಜಾಫರ್ ಅಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗೋಣಿಕೊಪ್ಪದ ಸರ್ಫುದ್ದೀನ್ ಸ್ವಾಗತಿಸಿ, ಮೂರ್ನಾಡಿನ ಸೈಫ್ ಅಲಿ ನಿರೂಪಿಸಿ, ಪಾಲಿಬೆಟ್ಟದ ಅಬ್ದುಲ್ ರಶೀದ್ ವಂದಿಸಿದರು.







