ಬಿಎಸ್‌ವೈಗೆ ಸಂಬಂಧಿಸಿದ ಸಿಡಿ ಬಿಡುಗಡೆಯ ಬ್ಲಾಕ್‌ಮೇಲ್
ಹುಬ್ಬಳ್ಳಿ ಮೂಲದ ಓರ್ವನ ಸೆರೆ
ಶಿವಮೊಗ್ಗ, ಜ. 29: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಂಬಂಧಿಸಿದಂತೆ ತನ್ನ ಬಳಿ ಸಿ.ಡಿ.ಗಳಿವೆ ಎಂದು ಹೇಳಿ ಬ್ಲ್ಯಾಕ್‌ಮೇಲ್ ಮಾಡಿದ್ದ ಹುಬ್ಬಳ್ಳಿ ಮೂಲದ ಓರ್ವನನ್ನು ಜಿಲ್ಲೆಯ ಶಿಕಾರಿಪುರ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ವರದಿಯಾಗಿದೆ. ಹುಬ್ಬಳ್ಳಿಯ ವಿದ್ಯಾನಗರದ ನೇಕಾರ ಕಾಲನಿಯ ನಿವಾಸಿ ಮುರಳಿ ಮಲವಾಡಿ(35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಎರಡು ಸಿ.ಡಿ, ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಪಾದಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರ ಮಾರ್ಗದರ್ಶನದಲ್ಲಿ ಶಿಕಾರಿಪುರ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಘಟನೆಯ ಹಿನ್ನೆಲೆ: ಜ. 21 ರಂದು ಶಿಕಾರಿಪುರ ಪಟ್ಟಣದಲ್ಲಿರುವ ಬಿ.ಎಸ್.ಯಡಿಯೂರಪ್ಪ ಪುತ್ರ ಶಾಸಕ ಬಿ.ವೈ.ರಾಘವೇಂದ್ರರವರ ಕಚೇರಿಗೆ ವ್ಯಕ್ತಿಯೋರ್ವ ಆಗಮಿಸಿದ್ದಾನೆ. ಕಚೇರಿಯಲ್ಲಿದ್ದ ಶಾಸಕರ ಆಪ್ತ ಸಹಾಯಕ ಬಸವಲಿಂಗಯ್ಯ ಮಠದ್‌ರವರೊಂದಿಗೆ ಮಾತನಾಡಿ, ‘ತನ್ನ ಬಳಿ ಬಿ.ಎಸ್.ಯಡಿಯೂರಪ್ಪರವರಿಗೆ ಸಂಬಂಧಿಸಿದ ಸಿ.ಡಿ.ಗಳಿವೆ. ಸೂಕ್ತ ಹಣದ ವ್ಯವಸ್ಥೆ ಮಾಡದಿದ್ದರೆ ಈ ಸಿ.ಡಿ.ಗಳನ್ನು ರಾಜಕೀಯ ಪಕ್ಷದ ಮುಖಂಡರಿಗೆ ನೀಡುವುದಾಗಿ’ ಬೆದರಿಕೆ ಹಾಕಿ ಹೋಗಿದ್ದ. ಜ. 23 ರಂದು ಬಸವಲಿಂಗಯ್ಯ ಮಠದ್ ಮೊಬೈಲ್‌ಗೆ ಮತ್ತೊಂದು ಮೊಬೈಲ್‌ನಿಂದ ಕರೆ ಮಾಡಿದ ವ್ಯಕ್ತಿಯೋರ್ವ, ತನ್ನನ್ನೂ ಮುರಳಿ ಎಂದು ಪರಿಚಯಿಸಿಕೊಂಡಿದ್ದ. ಸಿ.ಡಿ.ಯ ಬಗ್ಗೆ ಪ್ರಸ್ತಾಪಿಸಿ ಹಣ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾನೆ. ಈ ಕುರಿತಂತೆ ಬಸವಲಿಂಗಯ್ಯ ಮಠದ್‌ರವರು ಪೊಲೀಸರಿಗೆ ದೂರು ನೀಡಿದ್ದರು.
ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಅಂತಿಮವಾಗಿ ಹುಬ್ಬಳ್ಳಿಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಆರೋಪಿಯಿಂದ 2 ಸಿ.ಡಿ., 3 ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದರು. ವೀಡಿಯೊ ಇಲ್ಲ: ಸಿ.ಡಿ.ಗಳಲ್ಲಿ ಸ್ವತಃ ಆರೋಪಿಯೇ ಮೊಬೈಲ್ ಮೂಲಕ ಬೇರೆಯವರೊಂದಿಗೆ ಅಸಂಬದ್ಧ್ದವಾಗಿ ಮಾತನಾಡಿದ 1 ನಿಮಿಷದ ಸಂಭಾಷಣೆಯ ತುಣುಕುಗಳಿವೆ. ಇದರಲ್ಲಿ ಬೇರೆ ವ್ಯಕ್ತಿಗಳು ಮಾತನಾಡಿದ ಆಕ್ಷೇಪಾರ್ಹ ವೀಡಿಯೊ ಅಥವಾ ಸಂಭಾಷಣೆಯ ಯಾವುದೇ ತುಣುಕುಗಳಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.







