ರೋಗ ಬಾರದಂತೆ ಜಾಗೃತಿ ಮೂಡಿಸುವ ಕಾರ್ಯ ಅಗತ್ಯ: ಸೊರಕೆ

ಶಿರ್ವ, ಜ.29: ರೋಗ ಉಲ್ಬಣಗೊಂಡ ನಂತರ ಕೊಡಿಸುವ ಚಿಕಿತ್ಸೆಗಿಂತ ರೋಗ ಬರದಂತೆ ಆರೋಗ್ಯ ತಪಾಸಣೆಯ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಸೇವಾ ಸಂಘಟನೆಗಳಿಂದ ನಿರಂತರವಾಗಿ ನಡೆಯಬೇಕು ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧತ್ವ ನಿವಾರಣಾ ವಿಭಾಗ) ಇವುಗಳ ಸಹಯೋಗದೊಂದಿಗೆ ರವಿವಾರ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಏರ್ಪಡಿಸಲಾದ ಉಚಿತ ನೇತ್ರ ತಪಾಸಣೆ, ಚಿಕಿತ್ಸೆ, ಮಾಹಿತಿ ಹಾಗೂ ಮಧುಮೇಹ ತಪಾಸಣೆ, ರಕ್ತದ ಗುಂಪು ವರ್ಗೀಕರಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಂಭರ್ದಲ್ಲಿ ಶ್ರವಣದೋಷ ಇರುವ ವಿದ್ಯಾರ್ಥಿನಿಗೆ ರೋಟರಿ ವತಿಯಿಂದ 30ಸಾವಿರ ರೂ. ವೆಚ್ಚದಲ್ಲಿ ಉಚಿತ ಶ್ರವಣ ಉಪಕರಣವನ್ನು ವಿತರಿಸಲಾಯಿತು.
ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಡಾ.ಅರುಣ್ ಹೆಗ್ಡೆ ವಹಿಸಿದ್ದರು.
ಉಡುಪಿ ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ. ನಿತ್ಯಾನಂದ ನಾಯಕ್, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ್, ಪ್ರಸಾದ್ ನೇತ್ರಾಯಲದ ನೇತ್ರತಜ್ಞೆ ಡಾ.ನಿವೇದಿತಾ, ನೇತ್ರಾ ಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಧುಕರ್ ಮುಖ್ಯ ಅತಿಥಿ ಗಳಾಗಿದ್ದರು. ಯುವವೃಂದದ ಅಧ್ಯಕ್ಷ ಅನಂತರಾಮ ವಾಗ್ಲೆ, ಸುಕೇಶ್ ವಲದೂರು, ದಿನೇಶ್ ಅರಸೀಕಟ್ಟೆ ಉಪಸ್ಥಿತರಿದ್ದರು.
ಸಂಯೋಜಕ ಕೆ.ಆರ್.ಪಾಟ್ಕರ್ ಸ್ವಾಗತಿಸಿದರು. ಮೆಲ್ವಿನ್ ಡಿಸೋಜ ವಂದಿಸಿದರು. ದೇವದಾಸ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 150ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡಿದ್ದು, 40ಕ್ಕೂ ಅಧಿಕ ಮಂದಿಗೆ ಉಚಿತ ಕನ್ನಡಕ ವಿತರಿಸಲು ಶಿಫಾರಸು ಮಾಡಲಾಯಿತು.







