ಪುತ್ತೂರು: ಗಾಂಧೀ ಕಟ್ಟೆಯಲ್ಲಿ ಹುತಾತ್ಮ ದಿನಾಚರಣೆ

ಪುತ್ತೂರು,ಜ.30: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹುತಾತ್ಮ ದಿನಾಚರಣೆಯನ್ನು ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಗಾಂಧೀ ಕಟ್ಟೆಯಲ್ಲಿ ಸೋಮವಾರ ಆಚರಿಸಲಾಯಿತು. ಪುತ್ತೂರು ಗಾಂಧಿಕಟ್ಟೆ ಸಮಿತಿ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು ಮಹಾತ್ಮ ಗಾಂಧೀಜಿ ಅವರು ಸದಾ ಉತ್ತಮ ವಿಚಾರಗಳನ್ನೇ ಯೋಚಿಸುತ್ತಿದ್ದರು ಮತ್ತು ಕೈಗೊಳ್ಳುತ್ತಿದ್ದರು. ಅವರ ವಿಚಾರ ಧಾರೆಗಳನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು. ಅವರ ದಾರಿಯಲ್ಲಿ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಅಗ್ನಿ ಶಾಮಕ ದಳದ ವತಿಯಿಂದ ಸೈರನ್ ಮೊಳಗಿಸಲಾಯಿತು. ತಹಶೀಲ್ದಾರ್ ಅನಂತಶಂಕರ್, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಡಿವೈಎಸ್‌ಪಿ ಭಾಸ್ಕರ್ ರೈ, ಗಾಂಧಿಕಟ್ಟೆ ಸಮಿತಿ ಉಪಾಧ್ಯಕ್ಷ ಪ್ರೊ.ಬಿ.ಜೆ. ಸುವರ್ಣ, ಸದಸ್ಯರಾದ ಲೋಕೇಶ್ ಹೆಗ್ಡೆ, ಸೀತಾರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಗಾಂಧಿಕಟ್ಟೆ ಸಮಿತಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಅಳ್ವ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.





