ಜ.31ರಂದು ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡಿಸಿ ಎಸ್.ಡಿ.ಪಿ.ಐ ಕರಾಳ ದಿನಾಚರಣೆ

ಮಂಗಳೂರು, ಜ.30: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ, ನೋಟು ಅಮಾನ್ಯೀಕರಣ ಯೋಜನೆಯ ವೈಫಲ್ಯ, ಇದರ ದುಷ್ಪರಿಣಾಮ ಹಾಗೂ ಈ ಯೋಜನೆಯ 50 ದಿನಗಳ ನಂತರವೂ ಪರಿಸ್ಥಿತಿ ಹತೋಟಿಗೆ ತರಲು ಕೇಂದ್ರ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ಜನವರಿ 31ರಂದು ರಾಷ್ಟ್ರದಾದ್ಯಂತ ಕರಾಳ ದಿನವನ್ನಾಗಿ ಆಚರಿಸಲಿದ್ದೇವೆ. ಇದರ ಪ್ರಯುಕ್ತ ದೇಶದಾದ್ಯಂತ ಬೃಹತ್ ಪ್ರತಿಭಟನೆ, ಮಾನವ ಸರಪಳಿ, ರಾಸ್ತಾ ರೋಕೋ, ವಿಚಾರ ಗೋಷ್ಠಿ, ಕರಪತ್ರ ಹಂಚಿಕೆ ಹಾಗೂ ಪೋಸ್ಟರ್ ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದರ ಅಂಗವಾಗಿ ಜಿಲ್ಲೆಯ ಬಂಟ್ವಾಳ ಮತ್ತು ಸುಳ್ಯದಲ್ಲಿ ಸಂಜೆ 3 ಗಂಟೆಗೆ ಸರಿಯಾಗಿ ಪ್ರತಿಭಟನಾ ರ್ಯಾಲಿ ಮತ್ತು ಸಾರ್ವಜನಿಕ ಕಾರ್ಯಕ್ರಮ ನಡೆಸಲಾಗುವುದು. ಎಲ್ಲಾ ವಿಧಾನಸಭಾ ವ್ಯಾಪ್ತಿಗಳಲ್ಲಿ ಕರಪತ್ರ ವಿತರಣೆ, ಭಿತ್ತಿಪತ್ರ ಅಭಿಯಾನ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ನಿರಂತರವಾಗಿ ಜನಸಮಾನ್ಯರ ಮೇಲೆ ದುಷ್ಪರಿಣಾಮ ಬೀರುವಂತಹ ಜನವಿರೋಧಿ ನೀತಿಗಳನ್ನು ಬಹಳ ಚಾಣಾಕ್ಷ್ಯದೊಂದಿಗೆ ರಂಗು ರಂಗಿನ ಮಾತುಗಳನ್ನು ಆಡುವ ಮೂಲಕ ಸಾಂಸ್ಕೃತಿಕ ಹಾಗೂ ರಾಜಕೀಯ ಫ್ಯಾಶಿಸಂ ದೇಶದಲ್ಲಿ ಹೇರುತ್ತಾ ಇದೆ. 2016ರ ನವೆಂಬರ್ 8ರ ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳನ್ನು ಹಠಾತ್ತನೆ ರದ್ದುಗೊಳಿಸಿರುವುದು ಮೋದಿ ಸರಕಾರ ದೇಶದ ನಾಗರಿಕರ ಮೂಲಭೂತ ಹಕ್ಕಿನ ಮೇಲೆ ನಡೆಸಿದ ಭಾರಿ ಪ್ರಹಾರ.
ರಾಷ್ಟ್ರದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹೇರಿದಂತಾಗಿದ್ದು, ಇದರಿಂದ ಸಾಮಾನ್ಯ ಜನರ ಬದುಕು ಕಂಗಾಲಾಗಿದೆ. ಆದುದರಿಂದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಲು ಜಿಲ್ಲೆಯ ಎಲ್ಲಾ ಪ್ರಜ್ಞಾವಂತ ನಾಗರಿಕರು ನಮ್ಮೊಂದಿಗೆ ಕೈಜೊಡಿಸಬೇಕೆಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







