ಕೃಷ್ಣ ರಾಜೀನಾಮೆ ಕಾಂಗ್ರೆಸ್‌ಗೆ ದೊಡ್ಡ ಹೊಡೆತ: ಪೂಜಾರಿ

ಮಂಗಳೂರು, ಜ.30: ಮುತ್ಸದ್ಧಿ ರಾಜಕಾರಣಿ, ಸುಸಂಸ್ಕೃತ, ಸಮಾಧಾನಿ ಎಸ್.ಎಂ. ಕೃಷ್ಣ ಅವರ ರಾಜೀನಾಮೆ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ್ ಪೂಜಾರಿ ಹೇಳಿದ್ದಾರೆ.
ಸೋಮವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷ್ಣ ಅವರು ರವಿವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಂತರಂಗದ ಒಳಗಿದ್ದ ಭಾವನೆಗಳನ್ನು ಹೊರಹಾಕಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿಲ್ಲ, ಜನತಾದಳದ ಸರಕಾರವಿದೆ. ಇದು ಕರುಬರ ಸರಕಾರವೆಂದು ಕೆಲವರು ಹೇಳುತ್ತಿದ್ದಾರೆ. ನಾನು ಅದನ್ನು ಒಪ್ಪಲ್ಲ. ಒಂದು ಜಾತಿಯನ್ನು ಎಳೆಯುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ದುರಹಂಕಾರ ಮಿತಿ ಮೀರಿದೆ. ಅವರು ಕಾಂಗ್ರೆಸ್‌ಗೆ ಶನಿ ಇದ್ದಂತೆ. ಸಿದ್ದರಾಮಯ್ಯ ಅವರು ಪಕ್ಷದಿಂದ ಹೊರಗೆ ಹೋಗದೇ ಇದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲವೆಂದ ಅವರು, ಎಸ್.ಎಂ. ಕೃಷ್ಣ ಅವರೇ ಪಕ್ಷವನ್ನು ಬಿಟ್ಟು ಹೋಗಬೇಡಿ. ಜಾಫರ್ ಶರೀಫ್, ಪ್ರಕಾಶ್ ಹುಕ್ಕೇರಿ, ಮಂಡ್ಯ ಭಾಗದ ಮುಖಂಡರು ಪಕ್ಷವನ್ನು ಬಿಟ್ಟು ಹೋಗಬಾರದು. ಎಲ್ಲರೂ ಸೇರಿ ಹೋರಾಟ ಮಾಡಿ, ಸಿದ್ದರಾಮಯ್ಯ ಅವರ ದುರಹಂಕಾರವನ್ನು ತಡೆಯಲು ಒಟ್ಟಾಗಿ ನಿಲ್ಲೋಣ ಎಂದು ಅವರು ಹೇಳಿದರು.
ಎಸ್.ಎಂ. ಕೃಷ್ಣ ಅವರು ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ರಾಜೀನಾಮೆಯಿಂದ ಸೋನಿಯಾಗಾಂಧಿ ಅವರ ಮನಸ್ಸಿಗೆ ನೋವಾಗಿದೆ. ಕೃಷ್ಣ ಅವರು ನಿರ್ಧಾರ ಬದಲಾಯಿಸುವ ಅವಕಾಶವಿತ್ತು. ಮುಂದಿನ ಭವಿಷ್ಯದ ಕುರಿತು ಆಲೋಚಿಸಬೇಕಿತ್ತು. ಈಗಲೂ ಯಾವುದೇ ಪಕ್ಷಕ್ಕೆ ಸೇರಬೇಡಿ. ನೆಹರೂ ಕುಟುಂಬದಲ್ಲಿ ದ್ವೇಷ ರಾಜಕಾರಣ ಕಂಡಿಲ್ಲ. ನಿಮಗಿನ್ನೂ ಅವಕಾಶವಿದೆ ಎಂದು ತಿಳಿಸಿದರು.
ವಿರೋಧ ಪಕ್ಷಗಳು ನಿಮ್ಮನ್ನು ಮುಗಿಸಲು ಹೊಂಚು ಹಾಕುತ್ತಿವೆ. ವಿರೋಧ ಪಕ್ಷಕ್ಕೆ ನೀವು ದೊಡ್ಡ ಆಸ್ತಿಯಾಗಿದ್ದಿರಿ, ಎಚ್ಚರವಿರಲಿ ಮುಂದಿನ ರಾಜಕೀಯ ಜೀವನಕ್ಕೆ ಅವರೇ ಮುಳ್ಳಾಗುವರು ಎಂದು ಹೇಳಿದರು.







