ಸುಂದರ ಸಮಾಜ ನಿರ್ಮಾಣಕ್ಕೆ ಸೌಹಾರ್ದ ಅಗತ್ಯ: ಸಚಿವ ರೈ

ಬಂಟ್ವಾಳ, ಜ.30: ಧಾರ್ಮಿಕ ಹಾಗೂ ಸಾಮಾಜಿಕ ಸೌಹಾರ್ದತೆ ಇದ್ದಲ್ಲಿ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಜಾತಿ-ಧರ್ಮೀಯರು ಶ್ರಮಿಸಬೇಕಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯ ಮನಸ್ಸುಗಳನ್ನು ಪೋಣಿಸಲು ಸಹಕಾರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಆಲಡ್ಕ-ಪಾಣೆಮಂಗಳೂರು ಶಾಖೆಯ 3ನೆ ವಾರ್ಷಿಕೋತ್ಸವದ ಅಂಗವಾಗಿ ಸಂಶುಲ್ ಉಲಮಾ ನಗರದ ಆಲಡ್ಕ ಮೈದಾನದಲ್ಲಿ ಮರ್‌ಹೂಂ ಸಜಿಪ ಉಸ್ತಾದ್ ವೇದಿಕೆಯಲ್ಲಿ ರವಿವಾರ ರಾತ್ರಿ ನಡೆದ ಸಂಶುಲ್ ಉಲಮಾ ಅನುಸ್ಮರಣೆ ಹಾಗೂ ಸಮಸ್ತ ಆದರ್ಶ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದ್ವೇಷದಿಂದ ಈ ಜಗತ್ತಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಲು ಸಾಧ್ಯವಿದೆ ಎಂದ ಅವರು, ಒಂದು ಧರ್ಮದ ಕಾರ್ಯಕ್ರಮಕ್ಕೆ ಇತರ ಧರ್ಮದವರನ್ನು ಅಹ್ವಾನಿಸಿದಾಗ ಸಾಮಾಜಿಕ ಮತ್ತು ಧಾರ್ಮಿಕ ಸಮರಸ್ಯ ನಿರ್ಮಾಣವಾಗಲಿದಲ್ಲದೆ, ಸಮಾಜಕ್ಕೆ ಒಳ್ಳೆಯ ಸಂದೇಶ ಹರಡಲಿದೆ ಎಂದರು.
ಜಾತಿ ಧರ್ಮದ ಹೆಸರಿನಲ್ಲಿ ಕಚ್ಚಾಡದೆ ಎಲ್ಲರೂ ಪ್ರೀತಿ ವಿಶ್ವಾಸದಿಂದ ಒಗ್ಗಟ್ಟಾಗಿ ಬಾಳಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆಯ ಮುಖಂಡರು ಹಾಗೂ ಕಾರ್ಯಕರ್ತರು ಸರ್ವ ಧರ್ಮಿಯರನ್ನು ಅಹ್ವಾನಿಸಿ ಎರಡು ದಿನ ನಡೆಸಿರುವ ಈ ಕಾರ್ಯಕ್ರಮ ಶಾಂತಿ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಶಾಘ್ಲಿಸಿದರು.
ಮೂಡಿಗೆರೆ ಸಂಯುಕ್ತ ಜಮಾಅತ್ ಖಾಝಿ ಖಾಸಿಂ ಮುಸ್ಲಿಯಾರ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸೈಯದ್ ಎನ್.ಪಿ.ಎಂ. ಫಝಲ್ ಹಾಮಿದ್ ಪೂಕೋಯ ತಂಙಳ್ ಅಲ್-ಬುಖಾರಿ ಕುನ್ನುಂಗೈ ದುವಾಶಿರ್ವಚನಗೈದರು.
ಮಾಡನ್ನೂರ್ ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ಮುಖ್ಯ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಸದಾಶಿವ ಬಂಗೇರ, ನಾಮ ನಿರ್ದೇಶಿತ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಮಾಜಿ ಸದಸ್ಯ ಹಾಜಿ ಪಿ.ಮುಹಮ್ಮದ್ ರಫೀಕ್, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಚ್.ಎಸ್.ಉಸ್ಮಾನ್ ಹಾಜಿ ಪಾಣೆಮಂಗಳೂರು, ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಹಾಜಿ ಎನ್.ಎಚ್.ಆದಂ ಫೈಝಿ, ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಅಧ್ಯಕ್ಷ ಮುಹಮ್ಮದ್ ಹನೀಫ್ ಮೆಲ್ಕಾರ್, ಪ್ರಧಾನ ಕಾರ್ಯದರ್ಶಿ ಇರ್ಷಾದ್ ಗುಡ್ಡೆಯಂಗಡಿ, ಕೋಶಾಧಿಕಾರಿ ಹನೀಫ್ ಆಸ್ಕೋ, ಮಾಜಿ ಅಧ್ಯಕ್ಷ ಮುಹಮ್ಮದ್ ಬಶೀರ್, ಪ್ರಮುಖರಾದ ಅಹ್ಮದ್ ಬಾವಾ ಯಾಸೀನ್, ಹಾಜಿ ಎಸ್.ಅಬ್ಬಾಸ್ ಸಜಿಪ, ಪಿ.ಬಿ.ಅಹ್ಮದ್ ಹಾಜಿ ಪಾಣೆಮಂಗಳೂರು, ಎನ್.ಬಿ.ಅಬೂಬಕ್ಕರ್, ಅಬ್ದುಲ್ ಖಾದರ್ ಹಾಜಿ ಬೋಗೋಡಿ, ಅಬ್ದುಲ್ ಅಝೀರ್ ಆಲಡ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೂಡಿಗೆರೆ ಸಂಯುಕ್ತ ಜಮಾಅತ್ ಖಾಝಿ ಖಾಸಿಂ ಮುಸ್ಲಿಯಾರ್ ಮತ್ತು ಸಚಿವ ಬಿ.ರಮಾನಾಥ ರೈರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಬೂಸ್ವಾಲಿ ಫೈಝಿ ಅಕ್ಕರಂಗಡಿ ಸ್ವಾಗತಿಸಿದರು.
ಶಫೀಕ್ ದನ್ಯವಾದಗೈದರು. ಎಸ್ಕೆಎಸ್ಸೆಸ್ಸೆಫ್ ಸದಸ್ಯ ಸೈದ್ ಗುಡ್ಡೆಅಂಗಡಿ ಕಾರ್ಯಕ್ರಮ ನಿರೂಪಿಸಿದರು.







