ಬಿಜೆಪಿ ಮೀಸಲಾತಿಯ ವಿರೋಧಿ:ಮಾಯಾವತಿ

ಲಕ್ನೋ,ಜ.30: ಬಿಜೆಪಿಯು ಮೀಸಲಾತಿ ವಿರೋಧಿ ಮನೋಸ್ಥಿತಿಯನ್ನು ಹೊಂದಿದೆ ಎಂದು ಸೋಮವಾರ ಇಲ್ಲಿ ಆರೋಪಿಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು, ದಲಿತರು ಮತ್ತು ಹಿಂದುಳಿದವರಿಗಾಗಿ ಈಗಿರುವ ಶೇ.50 ಮೀಸಲಾತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ತನ್ನ ಪಕ್ಷವು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಮೀಸಲಾತಿ ಕುರಿತಂತೆ ಮಾಧ್ಯಮಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಾಂವಿಧಾನಿಕ ತಿದ್ದುಪಡಿಯ ಮೂಲಕ ಕೋಟಾ ಮಿತಿಯನ್ನು ಶೇ.50ಕ್ಕಿಂತ ಹೆಚ್ಚುಮಾಡಿ ಮೇಲ್ಜಾತಿಗಳಲ್ಲಿಯ ಬಡವರಿಗೆ ಮೀಸಲಾತಿ ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ ತನ್ನ ಪಕ್ಷವು ಒಲವು ಹೊಂದಿದೆ ಎಂದರು.
ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳ ತಪ್ಪುನೀತಿಗಳಿಂದಾಗಿ ಮೇಲ್ಜಾತಿಗಳಲ್ಲಿಯ ಬಡವರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಅವರ ಹಣಕಾಸು ಸ್ಥಿತಿಗತಿಯನ್ನು ಆಧರಿಸಿ ಅವರಿಗೆ ಮೀಸಲಾತಿ ಸೌಲಭ್ಯವನ್ನು ಒದಗಿಸುವ ಅಗತ್ಯವಿದೆಯೇ ಹೊರತು ಅವರ ಜಾತಿ ಅಥವಾ ಸಮುದಾಯದ ಆಧಾರದಲ್ಲಿ ಅಲ್ಲ ಎಂದ ಅವರು, ಮೇಲ್ಜಾತಿಗಳು ಮತ್ತು ಅಲ್ಪಸಂಖ್ಯಾತರಲ್ಲಿನ ಬಡವರಿಗೆ ಅವರ ಹಣಕಾಸು ಸ್ಥಿತಿಯನ್ನು ಆಧರಿಸಿ ಮೀಸಲಾತಿ ನೀಡಿದರೆ ಅದು ದಲಿತರು ಮತ್ತು ಹಿಂದುಳಿದವರ ಕೋಟಾ ಪ್ರಮಾಣವನ್ನು ಕಡಿಮೆಯಾಗಿಸುತ್ತದೆ ಎಂದು ಹೇಳುವ ಮೂಲಕ ಶಾ ಅವರು ಜನರ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿದರು.
ಬಿಜೆಪಿ ಮತ್ತು ಆರೆಸ್ಸೆಸ್ ಮೀಸಲಾತಿ ಕುರಿತು ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತು ರಾಷ್ಟ್ರೀಯ ಹಿತಸಕ್ತಿಯ ದೃಷ್ಟಿಯಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ಮಾಯಾವತಿ ಹೇಳಿದರು.







