ಆಧುನಿಕ ಆಹಾರ ಪದ್ದತಿ ಕ್ಯಾನ್ಸರ್‌ಗೆ ಪ್ರಮುಖ ಕಾರಣ: ಡಾ. ಸೈಫ್ರೈಡ್ ಕ್ನಾಸ್‌ಮುಲ್ಲರ್
ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

ಕೊಣಾಜೆ, ಜ.30: ಆಧುನಿಕತೆಯಿಂದಾಗಿ ಇಂದು ಅನೇಕ ಆಹಾರಗಳು ಮತ್ತು ಆಹಾರ ಕ್ರಮ ವಿಷಮಯವಾಗಿದ್ದು, ಅವೇ ಕ್ಯಾನ್ಸರ್‌ಗೆ ಕಾರಣವಾಗಿವೆ. ಅವುಗಳಲ್ಲಿರುವ ಕೆಲವು ವಿಷಕಾರಿ ಅಂಶಗಳು ಡಿ.ಎನ್.ಎ.ಯನ್ನು ಹಾನಿಗೊಳಿಸಿ (ಮ್ಯುಟೇಶನ್) ಜೀವಕೋಶಗಳನ್ನು ಕ್ಯಾನ್ಸರ್ ಕೋಶಗಳಾಗಿ ಪರಿವತಿಸುತ್ತವೆ.
ಜಗತ್ತಿನಾದ್ಯಂತ ಕ್ಯಾನ್ಸರ್ ರೋಗಿಗಳ ಪ್ರಮಾಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದು ಹೀಗಿಯೇ ಮುಂದುವರಿದರೆ ಚರ್ನೋಬಯೋಲ್ ದುರಂತಕ್ಕಿಂತಲೂ ಅಪಾಯಕಾರಿ ಎಂದು ಆಸ್ಟ್ರೀಯದ ವಿಯೆನ್ನಾ ಮೆಡಿಕಲ್ ಯುನಿವರ್ಸಿಟಿಯ ಡಾ. ಸೈಫ್ರೈಡ್ ಕ್ನಾಸ್‌ಮುಲ್ಲರ್ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸೋಮವಾರ ಹಳೆಸೆನೆಟ್ ಸಭಾಂಗಣದಲ್ಲಿ ನಡೆದ ಅನುವಂಶಿಕ(ಜಿನೋಮಿಕ್) ಅಸ್ಥಿರತೆ ಮತ್ತು ಮಾನವ ರೋಗಗಳು ಎಂಬ ವಿಷಯದ ಕುರಿತಾಗಿ ನಡೆದ ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಿ.ಎನ್.ಎ. ಮೇಲೆ ಪೋಷಕಾಂಶಗಳ ಪರಿಣಾಮ ಮತ್ತು ಕ್ಯಾನ್ಸರ್ ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಿದರು. ನಮ್ಮ ಆಹಾರ, ಆಹಾರ ಕ್ರಮ ಮತ್ತು ಕ್ಯಾನ್ಸರ್ ಕಾಯಿಲೆಗೆ ಒಂದಕ್ಕೊಂದು ನಿಕಟವಾದ ಸಂಬಂಧವಿದೆ. ಪ್ರಕೃತಿಯಿಂದ ನೀಡಿರುವ ಸಾತ್ವಿಕ ಆಹಾರವು ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳನ್ನು ಮಾತ್ರ ಪೂರೈಸುವುದಲ್ಲದೇ, ಕ್ಯಾನ್ಸರ್‌ಗಳನ್ನು ಪ್ರತಿಬಂಧಿಸುವ ಅನೇಕ ಅಂಶಗಳನ್ನು ಒಳಗೊಂಡಿದೆ ಎಂದು ಸೂಕ್ಷ್ಮ ಪೋಷಕಾಂಶಗಳು ಹೇರಳವಾಗಿರುವ ಮತ್ತು ನಾರು(ಫೈಬರ್)ಯುಕ್ತ ಆಹಾರಗಳನ್ನು ಹೆಚ್ಚು ತಿಂದರೆ ಕ್ಯಾನ್ಸರ್‌ನಿಂದ ದೂರ ಇರಬಹುದು. ಅತಿಯಾದ ದೇಹದ ತೂಕ (ಬೊಜ್ಜು) ಕೂಡ ಕ್ಯಾನ್ಸರ್‌ಗೆ ಪೂರಕವಾದ ಒಂದು ಪ್ರಮುಖ ಅಂಶ
ಎಂದು ಹೇಳಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ವಿಚಾರಸಂಕಿರಣವನ್ನು ಉದ್ಘಾಟಿಸಿ, ಮಂಗಳೂರು ವಿಶ್ವವಿದ್ಯಾಲಯವು ಸಂಶೋಧನಾತ್ಮಕ ಕೆಲಸಗಳಿಗೆ ಬಹಳಷ್ಟು ಒತ್ತು ನೀಡುತ್ತಿದ್ದು, ಈಗಾಗಲೇ ವಿವಿಯಲ್ಲಿ ಅತ್ಯಾಧುನಿಕ ಮಟ್ಟದ ವಿಜ್ಞಾನ ಪ್ರಯೋಗಾಲಯಗಳನ್ನು ನಿರ್ಮಾಣಗೊಂಡು ಗುಣಮಟ್ಟದ ಸಂಶೋಧನೆಯ ಕೆಲಸಗಳು ಸಕ್ರಿಯವಾಗಿ ನಡೆಯುತ್ತಿದೆ. ಅಲ್ಲದೆ ರೇಡಿಯೇಷನ್ ಫಿಸಿಕ್ಸ್ ಬಗ್ಗೆ ಮಂಗಳೂರು ವಿವಿಯು ಭಾರತದಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟಿದೆ ಎಂದು ಅವರು ಹೇಳಿದರು.
ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರ್‌ನ ಡಾ.ಪ್ರಕಾಶ್ ಹಂದೆ ಅವರು ಕಲರ್‌ಫುಲ್ ಕ್ಲೂಸ್ ಆಫ್ ಹೆಲ್ತ್, ಏಜಿಂಗ್ ಆಂಡ್ ಡಿಸೀಸಸ್ ಎಂಬ ವಿಷಯ ದ ಬಗ್ಗೆ ಉಪನ್ಯಾಸವನ್ನು ನೀಡುತ್ತಾ, ಮಾನವನ ಅನೇಕ ರೋಗಗಳಿಗೆ ಅನುವಂಶಿಕತೆಯ (ಜೀನೋಮಿಕ್) ಅಸ್ಥಿರತೆ ಪ್ರಮುಖ ಕಾರಣವಾಗಿದೆ. ಡಿ.ಎನ್.ಎ. ಅಥವಾ ಕ್ರೋಮೋಸೋಮ್‌ಗಳಲ್ಲಿ ಉಂಟಾಗುವ ಅಸ್ಥಿರತೆಯನ್ನು ಪತ್ತೆಹಚ್ಚಲು ತಂತ್ರಜಾನವು ಸಾಕಷ್ಟು ಅಭಿವೃದ್ಧಿಯಾಗಿದ್ದು, ಮಾನವನ ಕಾಯಿಲೆಗಳನ್ನು ಪತ್ತೆಹಚ್ಚುವಲ್ಲಿ ಸಹಕಾರಿಯಾಗಿವೆ. ಆ ಮೂಲಕ ರೋಗಗಳನ್ನು ಸೂಕ್ತ ಚಿಕಿತ್ಸೆ ನೀಡುವಲ್ಲಿ ವೈದ್ಯಕೀಯ ಕ್ಷೇತ್ರ ನೆರವಾಗಿವೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಂಗಾಪುರ್ ಹೆಲ್ತ್ ಆಂಡ್ ಅಲೆಕ್ಸಾಂಡ್ರಾ ಹಾಸ್ಪಿಟಲ್ ನ ಡಾ.ರಾಜರಾಮನಿಖಮ್ ಭಾಸ್ಕರ್, ವಿಐಟಿ ವಿವಿಯ ಡಾ.ರಾಧಾ ಸರಸ್ವತಿ, ಯುಎಸ್ಎನ ಡಾ.ಮುರಲೀಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಶ್ರೀಪಾದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.







