ಉಡುಪಿ ಅಷ್ಟಮಠಾಧೀಶರ ವಿರುದ್ಧ ಮಾಜಿ ಕಿರಿಯ ಪೀಠಾಧಿಪತಿಯಿಂದ ದಾವೆ
ಲಿಖಿತ ರೂಪದಲ್ಲಿ ಸಂವಿಧಾನಕ್ಕೆ ಆಗ್ರಹ

ಉಡುಪಿ, ಜ.30: ಪರ್ಯಾಯ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಶ್ರೀಪಾದರೂ ಸೇರಿದಂತೆ ಉಡುಪಿ ಅಷ್ಟಮಠಗಳ ಒಟ್ಟು 10 ಮಂದಿ ಪೀಠಾಧಿಪತಿಗಳ ವಿರುದ್ಧ ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ದಾವೆಯೊಂದನ್ನು ಹೂಡಲಾಗಿದೆ.
ಸುಮಾರು ಎರಡೂವರೆ ದಶಕಗಳ ಹಿಂದೆ ಪೇಜಾವರ ಶ್ರೀಗಳ ಶಿಷ್ಯರಾಗಿದ್ದ, ಅಷ್ಟ ಮಠದ ಯತಿಗಳಿಗೆ ನಿಷೇಧಿತವಾದ ವಿದೇಶಿ ಪ್ರವಾಸ ಕೈಗೊಂಡ ಕಾರಣಕ್ಕಾಗಿ ಅನಿವಾರ್ಯವಾಗಿ ಪೀಠತ್ಯಾಗ ಮಾಡಬೇಕಾಗಿ ಬಂದ ಶ್ರೀವಿಶ್ವ ವಿಜಯರು (ಪೂರ್ವಾಶ್ರಮದ ಹೆಸರು ಗುರುರಾಜ ಆಚಾರ್ಯ), ಉಡುಪಿ ಪರ್ಯಾಯಕ್ಕೆ ಸಂಬಂಧಿಸಿದಂತೆ ಅಷ್ಟಮಠಗಳ ನಡುವೆ ಇರುವ ಗೊಂದಲವನ್ನು ನಿವಾರಿಸಲು, ಅವುಗಳಿಗೆ ಒಂದು ನೊಂದಾಯಿತ ಲಿಖಿತ ಸಂವಿಧಾನವನ್ನು ರಚಿಸಲು ಸೂಚಿಸುವಂತೆ ಆಗ್ರಹಿಸಿ ನ್ಯಾಯಾಲಯದಲ್ಲಿ ಸೋಮವಾರ ಈ ದಾವೆಯನ್ನು ಹೂಡಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಉಡುಪಿ ಅಷ್ಟ ಮಠಾಧೀಶರುಗಳಲ್ಲಿ ಬಗೆಹರಿಯದ ಭಿನ್ನಾಭಿಪ್ರಾಯ, ವಿರೋಧ, ಅಸಹಕಾರಗಳು ಕಂಡುಬಂದಿದ್ದು, ಮುಖ್ಯವಾಗಿ ಅಷ್ಟ ಮಠಾಧೀಶರುಗಳ ನಡುವೆ ಹಲವು ಪರ್ಯಾಯ ಉತ್ಸವಗಳ ಸಂದರ್ಭಗಳಲ್ಲಿ ನಡೆದ ವಿವಾದ ಹಾಗೂ ತಿಕ್ಕಾಟಗಳಿಂದಾಗಿ ಉಡುಪಿ ಶ್ರೀಕೃಷ್ಣನ ಸ್ಥಾಪಕರಾದ ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಕ್ಕೆ ತೀವ್ರ ಅಪಚಾರ ಹಾಗೂ ಅನ್ಯಾಯಗಳಾಗುತ್ತಿವೆ ಎಂದವರು ಹೇಳಿದ್ದಾರೆ.
ಅಷ್ಟ ಮಠಾಧೀಶರುಗಳ ಒಳಗೆ ಸಾಮರಸ್ಯ ಕಾಪಾಡಲು ಹಾಗೂ ಉಡುಪಿಯ ಭವ್ಯ ಸಂಸ್ಕೃತಿ, ಆಚಾರ-ವಿಚಾರ, ನಡಾವಳಿ ಮತ್ತು ಸಂಪ್ರದಾಯಗಳನ್ನು ಕ್ರೋಢೀಕರಿಸಿ ಒಂದು ನೊಂದಾಯಿತ ಲಿಖಿತ ಸಂವಿಧಾನದ ಅಗತ್ಯತೆ ಇದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯ ಭವ್ಯ ಪರಂಪರೆ ಹಾಗೂ ಸಂಸ್ಥಾನಕ್ಕಿರುವ ಗೌರವವನ್ನು ಕಾಪಾಡಲು ಮೂಲ ಸಂಸ್ಥಾನದ ಘಟಕವಾಗಿರುವ ಈ ಎಂಟು ಮಠಾಧೀಶರುಗಳು ಮಾದರಿಯಾಗಿ ಇಂದಿನ ಸಮಾಜಕ್ಕೆ ಮಾರ್ಗದರ್ಶರಾಗಿ ಹಾಗೂ ಯುವಜನತೆಯಲ್ಲಿ ನೈತಿಕತೆ ಮತ್ತು ಸಂಸ್ಕೃತಿ ಬೆಳೆಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದವರು ದಾವೆಯಲ್ಲಿ ವಿವರಿಸಿದ್ದಾರೆ.
ಪೇಜಾವರ ಮಠದ ಕಿರಿಯ ಸ್ವಾಮೀಜಿಯಾಗಿ (1980ರ ದಶಕದಲ್ಲಿ) ಅವರ ಉತ್ತರಾಧಿಕಾರಿಯಾಗಿದ್ದ ತಾವು (ಶ್ರೀವಿಶ್ವವಿಜಯ), ಉಡುಪಿ ಅಷ್ಟಮಠದ ಯತಿಗಳಿಗೆ ನಿಷಿದ್ಧವಾಗಿದ್ದ ಸಾಗರೋಲ್ಲಂಘನೆ ಮಾಡಿ ಅಮೆರಿಕ ದೇಶಕ್ಕೆ ಹೋಗಿದ್ದು ಸರಿಯಲ್ಲವೆಂದು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಸಾರಿದ ಸಮರದಿಂದಾಗಿ ವಿವಾದ ಉದ್ಘವವಾಗಿತ್ತು. ಇದರಿಂದ ವಿಶ್ವವಿಜಯರು ಪೀಠತ್ಯಾಗ ಮಾಡಬೇಕಾಗಿ ಬಂದಿತ್ತು.
ಆದರೆ ಇದಾದ ಹತ್ತು ವರ್ಷಗಳ ಬಳಿಕ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರೇ ತಮ್ಮ ಲಿಖಿತ ಹೇಳಿಕೆಯ ವಿರುದ್ಧವಾಗಿ ವಿದೇಶ ಪ್ರವಾಸ ಕೈಗೊಂಡಿದ್ದಲ್ಲದೇ, ಈಗಲೂ ಪೀಠದಲ್ಲಿ ಮುಂದುವರಿದಿದ್ದಾರೆ. (ಪುತ್ತಿಗೆ ಶ್ರೀಗಳು ಹಲವು ಮಠಾಧೀಶರ ವಿರೋಧದ ನಡುವೆ ಪರ್ಯಾಯ ಪೀಠಾರೋಹಣ ಮಾಡಿ ಎರಡು ವರ್ಷ ಶ್ರೀಕೃಷ್ಣ ಪೂಜೆ ಮಾಡಿದ್ದರು.)
ಇದು ವಿಪರ್ಯಾಸವಲ್ಲವೇ ಎಂದು ಪ್ರಶ್ನಿಸಿರುವ ವಿಶ್ವವಿಜಯರು, ಅಷ್ಟ ಮಠಾಧೀಶರಿಗೂ ಒಂದೇ ಕಾನೂನು ಇರಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇನ್ನೂ ಅನೇಕ ವಿಚಾರಗಳ ಬಗ್ಗೆ ಮಾಧ್ವ ಸಂಸ್ಥಾನದಲ್ಲಿ ಯಾವುದೇ ರೀತಿಯ ಸಂವಿಧಾನ ಲಿಖಿತ ರೂಪದಲ್ಲಿ ಇಲ್ಲ. ಆದುದರಿಂದ ಮಠದ ಕಾನೂನು ಕಟ್ಟಳೆಗಳನ್ನು ಅವರವರಿಗೆ ಇಷ್ಟ ಬಂದ ರೀತಿಯಲ್ಲಿ ತಿರುಚಲಾಗುತ್ತಿದೆ ಎಂದವರು ದಾವೆಯಲ್ಲಿ ದೂರಿದ್ದಾರೆ.
ಆದುದರಿಂದ ಉಡುಪಿ ಶ್ರೀಕೃಷ್ಣ ಮಠ ಹಾಗೂ ಅಷ್ಟಮಠಗಳು ಒಂದು ಸಂಯುಕ್ತ ಸಂಸ್ಥಾನವಾಗಿರುವುದರಿಂದ ಆ ಮಠಗಳ ಎಂಟು ಮಠಾಧೀಶರುಗಳಿಗೆ ಸರಿಯಾದ ಸಂವಿಧಾನವನ್ನು ಲಿಖಿತ ರೂಪದಲ್ಲಿ ರಚಿಸಿ ನೊಂದಾಯಿಸುವಂತೆ ವಕೀಲರ ಮೂಲಕ 2016ರ ಜನವರಿ ತಿಂಗಳಲ್ಲಿ ಎಂಟು ಮಠಾದೀಶರಿಗೂ ನೋಟೀಸು ಕಳುಹಿಸಲಾಗಿತ್ತು. ಆದರೆ ಒಂದು ವರ್ಷ ಕಳೆದರೂ ಅದರ ಬಗ್ಗೆ ಯಾವುದೇ ಮಠಾಧೀಶರು ಯಾವುದೇ ಕ್ರಮ ಜರಗಿಸಿಲ್ಲ ಎಂದವರು ದಾವೆಯಲ್ಲಿ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಲಾಗಿದ್ದು, ವಿಶ್ವವಿಜಯರ ಪರವಾಗಿ ಮಂಗಳೂರಿನ ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ದಾವೆ ಹೂಡಿದ್ದಾರೆ. ಈ ಕಾನೂನಿನ ಸಮರದಲ್ಲಿ ತಮಗೆ ಯಾವುದೇ ರೀತಿಯ ವೈಯಕ್ತಿಕ ಫಲಾಕಾಂಕ್ಷೆ ಇಲ್ಲ ಎಂದ ಅವರು ಸ್ಪಷ್ಟಪಡಿಸಿದ್ದಾರೆ. ಉಡುಪಿಯ ಅಷ್ಟ ಮಠಾಧೀಶರೊಂದಿಗೆ ಪೇಜಾವರ ಮತ್ತು ಅದಮಾರು ಮಠದ ಕಿರಿಯ ಯತಿಗಳನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.
ಅಷ್ಟಮಠಾಧೀಶರೊಂದಿಗೆ ಚರ್ಚಿಸಿ ಕ್ರಮ: ಪೇಜಾವರ ಶ್ರೀ
ತಮ್ಮ ಶಿಷ್ಯರಾಗಿದ್ದ ವಿಶ್ವವಿಜಯರು ನ್ಯಾಯಾಲಯದಲ್ಲಿ ದಾವೆ ಹೂಡಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ನ್ಯಾಯಾಲಯದಿಂದ ಈವರೆಗೆ ಯಾವುದೇ ನೋಟೀಸು ಬಂದಿಲ್ಲ. ವಿಷಯ ನ್ಯಾಯಾಲಯದಲ್ಲಿರುವುದರಿಂದ ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈ ಬೆಳವಣಿಗೆಗಳ ಕುರಿತು ವಿವರಿಸಿದರು.
ನೋಟೀಸು ಬಂದ ನಂತರ ಅಷ್ಟ ಮಠಗಳ ಸ್ವಾಮೀಜಿಯವರೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದರು. ವಿಶ್ವವಿಜೇತರು ಈಗಲೂ ತಮ್ಮೆಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ ಸ್ವಾಮೀಜಿ, ಲಿಖಿತ ಸಂವಿಧಾನದ ಕುರಿತು ಅವರು ತಿಳಿಸಿದ್ದರೂ, ಕೋರ್ಟಿಗೆ ಹೋಗುವ ಕುರಿತಂತೆ ತಿಳಿಸಿಲ್ಲ ಎಂದರು.
ಲಿಖಿತ ಸಂವಿಧಾನದ ಕುರಿತಂತೆ ಮಠಾಧೀಶರಲ್ಲಿ ಒಪ್ಪಿಗೆ ಇದ್ದರೂ, ಅದರಲ್ಲಿ ಸೇರಬೇಕಾದ ಅಂಶಗಳ ಕುರಿತಂತೆ ಅಭಿಪ್ರಾಯ ಬೇಧಗಳಿವೆ. ವಿಶ್ವವಿಜಯರು ತಮಗೆ ಅನ್ಯಾಯವಾಗಿದೆ ಎಂದು ಭಾವಿಸಿರುವುದರಿಂದ ಲಿಖಿತ ಸಂವಿಧಾನಕ್ಕೆ ಆಗ್ರಹಿಸುತ್ತಿದ್ದಾರೆ ಎಂದರು. ಕೋರ್ಟ್ ತಮಗೆ ಸೂಚನೆ ನೀಡಬಹುದು. ಅಂತಿಮವಾಗಿ ಅದನ್ನು ರೂಪಿಸಬೇಕಾದವರು ಅಷ್ಟ ಮಠಾಧೀಶರು ಎಂದರು.







