ಪುತ್ತೂರು : ಬ್ರಹ್ಮಶ್ರೀ ನಾರಾಯಣ ಗುರು ಪೂಜಾ ಕಾರ್ಯಕ್ರಮ

ಪುತ್ತೂರು , ಜ.30 : ಮಹಾ ಮಾನವತಾವಾದದ ಮೇರು ಸಂದೇಶವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಕೇವಲ ಪೂಜೆಗೆ ಸೀಮಿತಗೊಳಿಸಬಾರದು. ಅವರು ಕೇವಲ ಬಿಲ್ಲವ ಸಮಾಜಕ್ಕೆ ಮಾತ್ರವಲ್ಲ, ತುಳಿತಕ್ಕೊಳಗಾದ ಎಲ್ಲ ಸಮಾಜದ ಒಳಿತಿಗಾಗಿ ಕೆಲಸ ಮಾಡಿದವರು. ಇಡೀ ಮಾನವ ಜನಾಂಗಕ್ಕೆ ಹೊಸ ಹಾದಿ ತೋರಿದ ಅವರ ಸಂದೇಶಗಳನ್ನು ಅನುಷ್ಠಾನ ಮಾಡುವ ಜೊತೆಗೆ ಅವರು ತೋರಿದ ಹಾದಿಯಲ್ಲಿ ಸಂಘಟಿತ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕು ಎಂದು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್ ಅವರು ಹೇಳಿದರು.
ಪುತ್ತೂರು ತಾಲ್ಲೂಕಿನ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಆಶ್ರಯದಲ್ಲಿ ಸೋಮವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಪೂಜೆ, ಭಜನೆ ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಲೇಶ್ ಪೂಜಾರಿ ಅಗತ್ತಾಡಿ ಅವರು ಗುರು ಸಂದೇಶ ನೀಡಿದರು. ಮಾನವೀಯತೆಗೆ ಜಾತಿ, ಧರ್ಮವಿಲ್ಲ ಎಂದು ತೋರಿಸಿ ಕೊಟ್ಟವರು, ಹಿಂಸೆಯನ್ನು ವಿಜೃಂಭಿಸಬಾರದು ಎಂದು ಹೇಳಿದವರು, ನಮ್ಮನ್ನು ನಾವು ಪ್ರೀತಿಸುತ್ತಾ, ಇನ್ನೊಬ್ಬರನ್ನು ಗೌರವಿಸುತ್ತಾ ಸಂಘಟನೆ ಮಾಡಬೇಕು ಎಂದು ಕಿವಿಮಾತು ಹೇಳಿದವರು ನಾರಾಯಣ ಗುರುಗಳು ಎಂದರು.
ಪ್ರಗತಿಪರ ಕೃಷಿಕ ಎಸ್.ಪಿ. ನಾರಾಯಣ ಗೌಡ ಪಾದೆ ಅವರು ಮಾತನಾಡಿ, ವಿದ್ಯೆ ನೀಡುವ ಗುರುಗಳು, ಆಧ್ಯಾತ್ಮ ಹಾದಿ ತೋರುವ ಗುರುಗಳು ನಮ್ಮ ಬದುಕಿನ ಎರಡು ಕಣ್ಣುಗಳು. ವಿದ್ಯಾಲಯ ಮತ್ತು ದೇವಾಲಯ ಎರಡೂ ಪ್ರಧಾನ ಕೇಂದ್ರಗಳು ಎಂದರು. ನಾರಾಯಣ ಗುರುಗಳು ,ಮಹಾತ್ಮ ಗಾಂಧೀಜಿಯವರು ಗ್ರಾಮೋದ್ಯೋಗದ ಕಲ್ಪನೆಯನ್ನು ಮುಂದಿಟ್ಟವರು. ಆದರೆ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದೇ ಇರುವುದು ನಮ್ಮ ದುರಂತ ಎಂದು ಅವರು ವಿಷಾದಿಸಿದರು.
ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ರಾಜೀವ ಪೂಜಾರಿ ಮುಂಡೋಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಯುವ ವಾಹಿನಿ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ಮಹಿಳಾ ವೇದಿಕೆ ಉಪಾಧ್ಯಕ್ಷೆ ಪೂಜಾ ವಸಂತ್, ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ರಜತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಜಯಲಕ್ಷ್ಮೀ ರೆಂಜಾಳ ಮತ್ತು ಸೋಮನಾಥ ನಡುಮನೆ ಅವರಿಗೆ ವೈದ್ಯಕೀಯ ಚಿಕಿತ್ಸೆಯ ಹಿನ್ನಲೆಯಲ್ಲಿ ಆರ್ಥಿಕ ನೆರವು ನೀಡಲಾಯಿತು.
ವಲಯ ಸಂಚಾಲಕ ಹೊನ್ನಪ್ಪ ಪೂಜಾರಿ ಕೈಂದಾಡಿ ಸ್ವಾಗತಿಸಿದರು. ಗ್ರಾಮ ಸಮಿತಿ ಸ್ಥಾಪಕಾಧ್ಯಕ್ಷ ಆನಂದ ಪೂಜಾರಿ ಪ್ರಸ್ತಾವನೆಗೈದರು.
ನವ್ಯಾ ದಾಮೋದರ ವಂದಿಸಿದರು. ಜಯರಾಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.







