ಕಂಬಳದ ಉಳಿವಿಗಾಗಿ ಯಾವುದೇ ಹೋರಾಟಕ್ಕೆ ಸಿದ್ದ : ಚಂದ್ರಹಾಸ ಶೆಟ್ಟಿ

ಪುತ್ತೂರು , ಜ.30 : ಕಂಬಳ ತುಳುನಾಡಿನ ಸಂಸ್ಕೃತಿಯ, ಸಂಪ್ರದಾಯದ ಪ್ರತೀಕವಾಗಿದ್ದು ಇದನ್ನು ನಿಷೇಧ ಮಾಡುವುದು ಸರಿಯಲ್ಲ. ಕಂಬಳದ ಉಳಿವಿಗಾಗಿ ಯಾವುದೇ ಹೋರಾಟ ನಡೆಸಲು ಪುತ್ತೂರು ಕೋಟಿಚೆನ್ನಯ ಕಂಬಳ ಸಮಿತಿ ಸಿದ್ಧವಾಗಿದೆ ಎಂದು ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಪೇಟಾದವರು ಕಂಬಳ ಹಾಗೂ ಕೋಣಗಳ ವಿರುದ್ಧ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಈ ಕುರಿತು ಅವರು ಮಾಡಿರುವ 68 ಆರೋಪದ ವಿರುದ್ಧವೂ ಕಂಬಳ ಸಮಿತಿಯವರು ಎಲ್ಲಾ ದಾಖಲೆಗಳನ್ನು ಹೈಕೋರ್ಟ್‌ಗೆ ನೀಡಿದ್ದಾರೆ. ಇದರಿಂದ ಜ.31ರಂದು ಹೈಕೋರ್ಟು ತೀರ್ಪು ನಮ್ಮ ಪರವಾಗಿ ಬರುವ ಸಂಪೂರ್ಣ ಭರವಸೆ ಇದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಂಬಳ ನಡೆಸಲು ಪೂರಕವಾದ ಕಾರ್ಯವನ್ನು ಮಾಡಲಿವೆ ಎಂದ ಅವರು , ಈ ಬಾರಿ 25ನೇ ವರ್ಷದ ಕಂಬಳವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದ್ದೆವು. ಆದರೆ ಪ್ರಾಣಿ ದಯಾ ಸಂಘದವರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಕಂಬಳ ನಿಂತಿದೆ. ಆದರೂ ಮಾರ್ಚ್‌ನಲ್ಲಿ ನಡೆಯುವ ಪುತ್ತೂರು ಕಂಬಳ ನಡೆದೆ ನಡೆಯುತ್ತದೆ ಎಂಬ ಪೂರ್ಣ ವಿಶ್ವಾಸವಿದೆ. ಕೋರ್ಟ್ ತೀರ್ಪು ವಿರುದ್ಧವಾಗಿ ಬಂದರೆ ಜಿಲ್ಲಾ ಕಂಬಳ ಸಮಿತಿಯವರ ಜೊತೆ ಚರ್ಚಿಸಿ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಿದ್ದೇವೆ. ಕಂಬಳದ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಸಮಿತಿ ತೀರ್ಪುಗಾರ ನಿರಂಜನ್ ರೈ ಮಠಂತಬೆಟ್ಟು ಮಾತನಾಡಿ, ಕಂಬಳವೆಂದರೆ ಕೇವಲ ಕೋಣಗಳನ್ನು ಓಡಿಸುವ ಸ್ಪರ್ಧೆಯಲ್ಲ. ತುಳುನಾಡಿನ ಆರಾಧನಾ ಪದ್ಧತಿ. ಜನಪದೀಯ ಕ್ರೀಡೆಯಾಗಿರುವ ಕಂಬಳದಲ್ಲಿ ಮಾನವೀಯತೆಯ ಸಂದೇಶವಿದೆ. ಸಹೋದರತೆ, ಸಹಬಾಳ್ವೆಯ ಸಂಕೇತವಿದೆ. ಕಂಬಳ ಉಳಿಯಬೇಕು. ಈ ಕ್ರೀಡೆ ದೈವ-ದೇವರ ಆಶೀರ್ವಾದದಿಂದ ಉಳಿಯುತ್ತದೆ ಎಂಬ ಸಂಪೂರ್ಣ ಭರವಸೆ ಇದೆ. ಈಗಾಗಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 300 ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಂಬಳದ ಪರವಾಗಿ ನಿರ್ಣಯ ಕೈಗೊಂಡು ಕೇಂದ್ರ ಸಚಿವರು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಇದು ಧನಾತ್ಮಕವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ, ಕೋಶಾಧಿಕಾರಿ ಪ್ರಸನ್ನ ಕುಮಾರ್ ರೈ, ಸದಸ್ಯರಾದ ಸುಧೀರ್ ಶೆಟ್ಟಿ ಹಾಗೂ ಸುದೇಶ್ ಕುಮಾರ್ ಚಿಕ್ಕಪುತ್ತೂರು ಉಪಸ್ಥಿತರಿದ್ದರು.







