ಮುಸ್ಲಿಂ ರಾಷ್ಟ್ರಗಳಿಗೆ ಅಮೆರಿಕ ನಿರ್ಬಂಧ: ಪಾಪ್ಯುಲರ್ ಫ್ರಂಟ್ ಖಂಡನೆ

ನವದೆಹಲಿ , ಜ.30 : ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಸ್ಲಿಮ್ ರಾಷ್ಟ್ರಗಳಾದ ಇರಾಕ್, ಇರಾನ್, ಸುಡಾನ್, ಸೊಮಾಲಿಯಾ, ಲಿಬಿಯಾ, ಸಿರಿಯಾ ಮತ್ತು ಯಮನ್ ಪ್ರಜೆಗಳಿಗೆ ವಲಸೆ ನಿಷೇಧ ಮಾಡಿರುವ ಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇ. ಅಬೂಬಕರ್‌ರವರು ಬಲವಾಗಿ ಖಂಡಿಸಿದ್ದಾರೆ.
ಮುಸ್ಲಿಮ್ ರಾಷ್ಟಗಳ ಪ್ರಜೆಗಳಿಗೆ ವಲಸೆ ನಿಷೇಧಿಸಿರುವುದು ಅತ್ಯಂತ ಹುಚ್ಚುತನದ ನಿರ್ಧಾರವಾಗಿದೆ ಮತ್ತು ಈ ಮೂಲಕ ಟ್ರಂಪ್ ಅಮೆರಿಕ ತಾನು ಹೊಂದಿರುವ ಘನತೆ ಧಾರ್ಮಿಕ ಸ್ವಾತಂತ್ರ ಸಮಾನತೆ ಮತ್ತು ಬಹುಸಂಸ್ಕೃತಿ ತತ್ವಗಳನ್ನು ನೇರವಾಗಿ ವಿರೋಧಿಸಿದ್ದಾರೆ ಎಂದು ದೂರಿದರು.
ಅಮೆರಿಕದಾದ್ಯಂತ ಇರುವ ಬಿಳಿ ಜನಾಂಗೀಯರು ಸ್ವತಃ ತಾವು ಯುರೋಪಿನಿಂದ ವಲಸೆ ಬಂದವರೆಂಬುದನ್ನು ಮರೆಯಬಾರದು. ಈಗಾಗಲೇ ಅಮೇರಿಕಾದ ಅರ್ಧದಷ್ಟಿರುವ ಅಲ್ಲಿನ ಮೂಲ ನಿವಾಸಿಗಳು ವಲಸಿಗರಿಗೆ ತಡೆ ಹೇರಿದ್ದರೆ ಇಂದು ಅರ್ಧದಷ್ಟಿರುವ ಬಿಳಿಯರಲ್ಲಿ ಇಂದು ಓರ್ವನೂ ಅಲ್ಲಿ ವಾಸಿಸುತ್ತಿರಲಿಲ್ಲ. ವಲಸೆ ನಿಷೇಧಕ್ಕೊಳಗಾದ ಎಲ್ಲ ಏಳು ರಾಷ್ಟ್ರಗಳು ಅಮೆರಿಕ ಸರರ್ಕಾರದ ವಿದೇಶಾಂಗ ನೀತಿಯಲ್ಲಿನ ಸತತವಾದ ಅನೈತಿಕ ಹಸ್ತ್ತಕ್ಷೇಪದ ಬಲಿಪಶುಗಳಾಗಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಆರ್ಥಿಕವಾಗಿ ತಡೆಯೊಡ್ಡುವ ಹಿನ್ನೆಲೆಯಿಂದ ಮತ್ತು ಮಿಲಿಟರಿ ಹಸ್ತಕ್ಷೇಪದ ಮೂಲಕ ಉಂಟಾದ ದಾಳಿಯಿಂದ ಮಿಲಿಯಾಂತರ ಮಂದಿ ಬಲಿಯಾಗಿದ್ದರೆ ಉಳಿದ ಬಹುತೇಕ ಮಂದಿ ಯುದ್ಧ ಪೀಡಿತರಾಗಿದ್ದಾರೆ. ಅಮೆರಿಕ ದಾಳಿಯ ಮೊದಲು ಸ್ವತಂತ್ರ ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸಿದ್ದ ಈ ಅರಬ್ ರಾಷ್ಟ್ರಗಳು ಇದೀಗ ಬಡತನದಿಂದ ಬಳಲುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನೈತಿಕತೆ ಮತ್ತು ಮಾನವೀಯತೆ ಪ್ರೀತಿಸುವ ಅಮೆರಿಕದ ಮತ್ತು ಇತರೆ ಹೊರ ರಾಷ್ಟ್ರದ ಜನರು ದಬ್ಬಾಳಿಕೆಯ ನಡೆಯ ವಿರುದ್ಧ ಧ್ವನಿ ಎತ್ತಿ, ಸವಾಲೆಸೆದಿದ್ದಾರೆ. ಇಂತಹ ಹುಚ್ಚು ನಡೆಯಿಂದ ಹಿಂದೆ ಸರಿಯಲು ಅಮೆರಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜನರು ಟ್ರಂಪ್ ಮೇಲೆ ಒತ್ತಡ ಹೇರಬೇಕು ಎಂದು ಕೇಳಿಕೊಂಡಿರುವ ಇ. ಅಬೂಬಕರ್ ಅವರು, ಜಾಗತಿಕವಾಗಿ ಮುಸ್ಲಿಂ ರಾಷ್ಟ್ರಗಳ ಸರ್ಕಾರಗಳು ಮುಸ್ಲಿಮರ ಮೇಲೆ ಹೇರಿರುವ ಈ ಅವಮಾನಕರ ಸವಾಲನ್ನು ಎದುರಿಸುವ ಸಲುವಾಗಿ ಮುಸ್ಲಿಮರ ಘನತೆ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.







