ಉಡುಪಿ ನಗರಸಭೆ : 1.50ಕೋಟಿ ರೂ. ಮಿಗತೆ ಬಜೆಟ್ ಮಂಡನೆ

ಉಡುಪಿ, ಜ.30: ಉಡುಪಿ ನಗರಸಭೆಯ 2017-18ನೆ ಸಾಲಿನ ಆಯವ್ಯಯ ಮುಂಗಡ ಪತ್ರವನ್ನು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು.
ಈ ಬಾರಿಯ ಮುಂಗಡ ಪತ್ರದಲ್ಲಿ ಒಟ್ಟು 100.72 ಕೋಟಿ ರೂ. ಅಂದಾಜು ಆದಾಯ(ಆರಂಭದ ಶಿಲ್ಕು 51.31ಕೋಟಿ ರೂ. ಮತ್ತು ಒಟ್ಟು ಸ್ವೀಕೃತಿಗಳು 49.41ಕೋಟಿ ರೂ.) ಹಾಗೂ 99.22 ಕೋಟಿ ರೂ. ಅಂದಾಜು ವೆಚ್ಚಗಳನ್ನು ತೋರಿಸಿರುವ ಅಧ್ಯಕ್ಷರು, 1,50,37ಸಾವಿರ ರೂ. ಮಿಗತೆಯ ಬಜೆಟ್‌ನ್ನು ಮಂಡಿಸಿದ್ದಾರೆ.
ಆದಾಯಗಳ ಅಂದಾಜು
ಹಣಕಾಸು ಆಯೋಗಗಳ ಅನುದಾನ: 23.10 ಕೋಟಿ(ಕೇಂದ್ರ ಹಣ ಕಾಸು ಆಯೋಗ- 4.90ಕೋಟಿ, ರಾಜ್ಯ ಆಯೋಗ- 5.30ಕೋಟಿ, ಸಿಬ್ಬಂದಿ ವೇತನ ಅನುದಾನ- 3.50ಕೋಟಿ, ವಿದ್ಯುತ್ ಬಿಲ್ ಅನುದಾನ- 5ಕೋಟಿ, ಅಮೃತ್ ಯೋಜನೆ- 36ಲಕ್ಷ, ಎಸ್‌ಎಫ್‌ಸಿ ವಿಶೇಷ ಅನು ದಾನ- 2ಕೋಟಿ, ಸ್ವಚ್ಛ ಭಾರತ್ ಮಿಷನ್- 2ಕೋಟಿ), ಇತರ ಅನುದಾನ: 55ಲಕ್ಷ ರೂ., ನಗರಸಭೆ ಆದಾಯ: ಆಸ್ತಿ ತೆರಿಗೆ- 11.60ಕೋಟಿ, ವ್ಯಾಪಾರ, ಕಟ್ಟಡ ಪರವಾನಿಗೆ -1.20ಕೋಟಿ, ನೀರು ಸರಬರಾಜು- 9.50 ಕೋಟಿ, ಒಳಚರಂಡಿ, ವಾಣಿಜ್ಯ ಸಂಕೀರ್ಣ- 1.50ಕೋಟಿ ರೂ.
ವೆಚ್ಚಗಳ ಅಂದಾಜು
ಆಡಳಿತಾತ್ಮಕ ವೆಚ್ಚಗಳು- 3.36ಕೋಟಿ, ಲೋಕೋಪಯೋಗಿ ಕಾಮಗಾರಿ ಗಳು- 11.49ಕೋಟಿ, ದಾರಿದೀಪ- 5.60ಕೋಟಿ, ನೀರು ಸರಬರಾಜು- 2.15ಕೋಟಿ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆ- 8.84ಕೋಟಿ, ಒಳಚರಂಡಿ ಯೋಜನೆ-1.51ಕೋಟಿ, ಉದ್ಯಾನವನ- 75ಲಕ್ಷ ರೂ., ಬಡವರ ಕಲ್ಯಾಣ ನಿಧಿ-55ಲಕ್ಷ ರೂ., ವಿಕಲಚೇತನರ ಕಲ್ಯಾಣನಿಧಿ- 22ಲಕ್ಷ ರೂ., ನಲ್ಮ್ ಯೋಜನೆ- 20ಲಕ್ಷ ರೂ., ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿ ನಿಧಿ- 2ಕೋಟಿ ರೂ.
ಅಭಿವೃದ್ಧಿ ಕಾರ್ಯಕ್ರಮಗಳು
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 2ಕೋಟಿ ರೂ., ಒಳಚರಂಡಿ ನಿರ್ಮಾಣ, ನಿರ್ವಹಣೆ, ಯಂತ್ರೋಪಕಣಗಳ ಖರೀದಿಗೆ ಒಟ್ಟು 2.59ಕೋಟಿ, ಕಲ್ಮಾಡಿ ಸೇತುವೆ ಬಳಿ ಸೇರಿದಂತೆ ವಿವಿಧ ಪಾರ್ಕ್ ನಿರ್ಮಾಣಕ್ಕೆ 56ಲಕ್ಷ ರೂ., ಪಾರ್ಕ್‌ಗಳ ನಿರ್ವಹಣೆಗೆ 35ಲಕ್ಷ ರೂ., ಮಲ್ಪೆ ಮತ್ತು ಇಂದ್ರಾಳಿ ಸ್ಮಶಾನ ಅಭಿವೃದ್ಧಿ, ದುರಸ್ತಿ, ನಿರ್ವಹಣೆಗೆ ಒಟ್ಟು 31.50 ಲಕ್ಷ ರೂ., ಕ್ರೀಡೆ ಯನ್ನು ಉತ್ತೇಜಿಸಲು 3ಲಕ್ಷ ರೂ. ನಗರಸಭಾ ನಿಧಿ, ರಸ್ತೆ ಚರಂಡಿ ಸಂಪರ್ಕ, ಹೊಸ ರಸ್ತೆ ಚರಂಡಿ, ಫುಟ್‌ಪಾತ್ ನಿರ್ಮಾಣ ಮತ್ತು ದುರಸ್ತಿಗೆ 21ಕೋಟಿ ರೂ., ರಸ್ತೆ ತಡೆಗೋಡೆಗಳ ರಚನೆ, ದುರಸ್ತಿ ಮತ್ತು ತೋಡುಗಳಿಗೆ 1.33 ಕೋಟಿ ರೂ., ಎಲ್‌ಇಡಿ ಸಹಿತ ಹೊಸ ದಾರಿದೀಪ ಗಳ ಅಳವಡಿಕೆ ಮತ್ತು ನಿರ್ವಹಣೆಗೆ 3ಕೋಟಿ ರೂ. ಮೀಸಲಿರಿಸಲಾಗಿದೆ.
ಹೊಸ ಯೋಜನೆಗಳು
ಬೀಡಿನಗುಡ್ಡೆ, ಮಿಷನ್ ಕಂಪೌಂಡ್, ಎಂಡ್‌ಪಾಯಿಂಟ್, ಬ್ರಹ್ಮಗಿರಿ, ಬನ್ನಂಜೆಯಲ್ಲಿ ವೃತ್ತಗಳ ನಿರ್ಮಾಣ, ಮಣಿಪಾಲ, ಮಿಷನ್ ಕಂಪೌಂಡ್, ಡಯಾನ ಟಾಕೀಸ್ ಮುಂಭಾಗ, ಬೀಡಿನಗುಡ್ಡೆ, ನಿಟ್ಟೂರು, ಮಲ್ಪೆ ಉಪ ಕಚೇರಿ ಎದುರು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗುವುದು.
ನಗರಸಭೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ 2ಕೋಟಿ ರೂ. ಮತ್ತು ಸಿಬ್ಬಂದಿಗಳ ವಸತಿಗೃಹ ನಿರ್ಮಾಣಕ್ಕೆ 1.50 ಕೋಟಿ ಕಾದಿರಿಸಲಾಗಿದೆ.
ಸಂತೆಕಟ್ಟೆಯ ವಾರದ ಸಂತೆ ನಡೆಯುವ ದಿನಗಳಲ್ಲಿ ಜನನಿಬಿಡತೆ, ವಾಹನ ದಟ್ಟಣೆಯನ್ನು ನಿಯಂತ್ರಿಸಲು ಮಾರ್ಕೆಟ್‌ನ್ನು ವೀರಭದ್ರ ದೇವಸ್ಥಾನದ ಬಳಿ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಲಾಗಿದ್ದು, ಈ ಸ್ಥಳವನ್ನು ಮಾರುಕಟ್ಟೆ ಯಾಗಿ ಅಭಿವೃದ್ಧಿ ಪಡಿಸಲು 1.50ಕೋಟಿ ರೂ. ಮೀಸಲಿರಿಸಲಾಗಿದೆ.
ವಸತಿ ಸಮುಚ್ಛಯಗಳಿಗೆ ಎಸ್‌ಟಿಪಿಯನ್ನು ಕಡ್ಡಾಯಗೊಳಿಸಲಾಗುವುದು ಮತ್ತು ಮನೆಗಳ ಒಳಚರಂಡಿ ಸಂಪರ್ಕ ಛೇಂಬರ್‌ಗಳಿಗೆ ಜಾಲರಿಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷರು ತಮ್ಮ ಮುಂಗಡಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬ್ಯಾನರ್ ಹಾವಳಿಗೆ ತಡೆ
ಅನುಮತಿ ಇಲ್ಲದೆ ಹಾಕುವ ಬ್ಯಾನರ್‌ಗಳ ಹಾವಳಿಯನ್ನು ತಡೆಗಟ್ಟಲು ನಿಗದಿತ ಸಂಖ್ಯೆಯ ಮಿತಿಯಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಬೃಹತ್ ಗಾತ್ರದ ಬ್ಯಾನರ್‌ಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ದಿನದ 24ಗಂಟೆಗಳ ಕಾಲ ನೀರು ಪೂರೈಸುವ ನಿಟ್ಟಿನಲ್ಲಿ ಅಗತ್ಯ ಇರುವಲ್ಲಿಗೆ ಹೆಚ್ಚುವರಿ ಕೊಳವೆ ಅಳವಡಿಸಲು ಮತ್ತು ನಿರ್ವಹಣೆಗೆ 80ಲಕ್ಷ ರೂ., ನೀರು ಸರಬರಾಜು ವಿಭಾಗಕ್ಕೆ ಅಗತ್ಯ ವಾಹನ, ಯಂತ್ರೋಪಕರಣಗಳ ಖರೀದಿಗೆ 35ಲಕ್ಷ ರೂ., ನೀರಿನ ಅಭಾವ ಇರುವ ಸಮಯದಲ್ಲಿ ಸೂಕ್ತ ನಿರ್ವಹಣೆಗಾಗಿ 60 ಲಕ್ಷ ರೂ. ಕಾದಿರಿಸಲಾಗಿದೆ. ಕುಡ್ಸೆಂಪ್ ಎರಡನೆ ಹಂತದ ಯೋಜನೆಯಲ್ಲಿ 1,87,57,000ರೂ. ಮಂಜೂರಾಗಿದ್ದು, ಇದರ ಡಿಪಿಆರ್ ತಯಾರಿಕಾ ಹಂತದಲ್ಲಿದೆ ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಪೌರಾಯುಕ್ತ ಡಿ.ಮಂಜುನಾಥಯ್ಯ ಉಪಸ್ಥಿತರಿದ್ದರು.
ಹೆಚ್ಚುವರಿ ತ್ಯಾಜ್ಯ ನಿರ್ವಹಣಾ ಶುಲ್ಕ
ಘನತ್ಯಾಜ್ಯ ನಿರ್ವಹಣೆಗಾಗಿ 7.45ಕೋಟಿ ರೂ. ಮೀಸಲಿರಿಸಿದ್ದು, ಹೆಚ್ಚುವರಿ ತ್ಯಾಜ್ಯ ನಿರ್ವಹಣಾ ಶುಲ್ಕವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸೆ ಎಸೆಯುವವರ ಬಗ್ಗೆ ನಿಗಾವಹಿಸಲು ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷೆ ಮೀನಾಕ್ಷಿ ಮುಂಗಡಪತ್ರದಲ್ಲಿ ತಿಳಿಸಿದ್ದಾರೆ.
ಅಮೃತ್ ಸಿಟಿ ಯೋಜನೆಯಲ್ಲಿ ಐದು ವರ್ಷಗಳ ಅವಧಿಗೆ 132.59 ಕೋಟಿ ರೂ. ಮಂಜೂರಾಗಿದ್ದು, ಇದರಲ್ಲಿ ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿ ಮತ್ತು ಭಜುಂಗ ಪಾರ್ಕ್ ಆವರಣ ಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯ ಶೇ.30ರಷ್ಟು ನಗರಸಭೆ ಭರಿಸಬೇಕಾಗಿರುವುದರಿಂದ 10ಕೋಟಿ ರೂ. ಮೀಸಲಿರಿಸಲಾಗಿದೆ. ಮುಖ್ಯ ಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯ 3ನೆ ಹಂತದ ಕಾಮಗಾರಿಗಾಗಿ 35ಕೋಟಿ ರೂ. ಮಂಜೂರಾಗಿದೆ ಎಂದರು.







