ಮಾಧ್ಯಮಗಳ ಬಗ್ಗೆ ಯಡಿಯೂರಪ್ಪ ಜನಪ್ರತಿನಿಧಿಗಳಿಗೆ ನೀಡಿದ ಎಚ್ಚರಿಕೆ ಏನು ?
ಬಿಜೆಪಿ ಮಾಧ್ಯಮ ಕಾರ್ಯಾಗಾರ ಉದ್ಘಾಟನೆ

ಬೆಂಗಳೂರು, ಜ 30: ಸಾರ್ವಜನಿಕ ವಲಯದಲ್ಲಿರುವವರು ಯಾವುದೇ ಹೇಳಿಕೆಗಳನ್ನು ನೀಡುವ ಮೊದಲು ಎಚ್ಚರ ವಹಿಸಬೇಕು. ಕೇವಲ ಜನಪ್ರಿಯತೆ, ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಆಹಾರ ಆಗಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಸೋಮವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾಧ್ಯಮ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷಗಳ ಏಳು ಬೀಳಿನಲ್ಲಿ ಮಾಧ್ಯಮಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಒಂದು ಪಕ್ಷವನ್ನು ಉನ್ನತ ಮಟ್ಟಕ್ಕೆ ತರುವ, ಇಲ್ಲವೇ ನಾಶ ಮಾಡುವ ಸಾಮರ್ಥ್ಯವು ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿರುವ ಮಾಧ್ಯಮಕ್ಕಿದೆ ಎಂದು ಹೇಳಿದರು.
ಮಾಧ್ಯಮಗಳಿಂದ ಪಕ್ಷಗಳ ಪ್ರತಿಷ್ಠೆ ಹೆಚ್ಚಿಸಲು ಅಥವಾ ಕುಗ್ಗಿಸಲು ಸಾಧ್ಯ. ಹಾಗಾಗಿ ನಾವೆಲ್ಲಾ ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕು. ಮಾಧ್ಯಮಗಳಲ್ಲಿ ಪಕ್ಷದ ಬಗ್ಗೆ ನಕಾರಾತ್ಮಕ ವಿಚಾರಗಳು ಬರದಂತೆ ಎಚ್ಚರವಹಿಸಬೇಕು. ಒಂದು ಬಾರಿ ನಕಾರಾತ್ಮಕ ವಿಚಾರಗಳು ಬಂದರೆ ಅದನ್ನು ಸರಿಪಡಿಸಲು ಹರಸಾಹಸ ಮಾಡಬೇಕಾಗುತ್ತದೆ. ಇದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕೆಂದು ಯಡಿಯೂರಪ್ಪ ನುಡಿದರು.
ಪಕ್ಷದ ನೀತಿ ಸಿದ್ಧಾಂತಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಜವಾಬ್ದಾರಿ ಮಾಧ್ಯಮ ಉಸ್ತುವಾರಿಗಳದ್ದಾಗಿದೆ. ಆ ನಿಟ್ಟಿನಲ್ಲಿ ಅವರು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಬೇಕು ಎಂದ ಅವರು, ನಿರ್ಣಾಯಕವಾಗಿರುವ ಮುಂದಿನ ಚುನಾವಣೆಗಳಿಗೆ ಸರ್ವಸನ್ನದ್ಧರಾಗುವಂತೆ ಕಾರ್ಯಕರ್ತರಿಗೆ ಅವರು ಕರೆ ನೀಡಿದರು.
ಮಾಜಿ ಸಚಿವ ಸುರೇಶ್‌ಕುಮಾರ್, ಚುನಾವಣೆಗೆ ಇನ್ನು 400 ದಿನಗಳ ಮಾತ್ರ ಇದೆ. ಈ ಹಂತದಲ್ಲಿ ನಾವು ಆಡುವ ಪ್ರತಿ ಮಾತು, ಹೇಳಿಕೆಗಳು ಪಕ್ಷದ ಬಲವರ್ಧನೆಗೆ ಪೂರಕವಾಗಿರಬೇಕು. ಯಾರು ಯಾವುದೇ ಕಾರಣಕ್ಕೂ ಬಹಿರಂಗವಾಗಿ ಪಕ್ಷದ ವಿರುದ್ಧ ಮಾತನಾಡಬಾರದು. ಅದಕ್ಕಾಗಿಯೇ ಮಾಧ್ಯಮ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶೋಭಾಕರಂದ್ಲಾಜೆ, ಅರವಿಂದ ಲಿಂಬಾವಳಿ, ಸಿ.ಟಿ. ರವಿ, ರವಿಕುಮಾರ್, ಬಿಜೆಪಿ ವಕ್ತಾರ ಗೋ. ಮಧುಸೂಧನ್, ಸೋಮಶೇಖರ್, ಅನ್ವರ್ ಮಾನಪ್ಪಾಡಿ ಸೇರಿ ಪ್ರಮುಖರು ಹಾಜರಿದ್ದರು.





