ಮುಸ್ಲಿಮರ ಮೇಲಿನ ನಿಷೇಧವಲ್ಲ: ಟ್ರಂಪ್

ವಾಶಿಂಗ್ಟನ್, ಜ. 30: ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳು ಅಮೆರಿಕ ಪ್ರವೇಶಿಸುವುದರ ಮೇಲೆ ವಿಧಿಸಲಾಗಿರುವ ನಿಷೇಧ ‘ಮುಸ್ಲಿಮರ ಮೇಲೆ ವಿಧಿಸಿರುವ ನಿಷೇಧವಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ.
ಮುಸ್ಲಿಮ್ ದೇಶಗಳ ಪ್ರಯಾಣಿಕರ ಮೇಲಿನ ಅಮೆರಿಕದ ನಿಷೇಧಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ಹಾಗೂ ಅಮೆರಿಕದಲ್ಲಿ ಬೃಹತ್ ಪ್ರತಿಭಟನೆಗಳು ವ್ಯಕ್ತವಾದ ಬಳಿಕ ಟ್ರಂಪ್ ಈ ಸ್ಪಷ್ಟನೆ ನೀಡಿದ್ದಾರೆ.
‘‘ಅಮೆರಿಕ ವಲಸಿಗರ ಹೆಮ್ಮೆಯ ದೇಶವಾಗಿದೆ. ದೌರ್ಜನ್ಯದಿಂದ ತಪ್ಪಿಸಿಕೊಂಡು ಬರುವವರಿಗೆ ಪ್ರೀತಿ ತೋರಿಸುವುದನ್ನು ನಾವು ಮುಂದುವರಿಸುತ್ತೇವೆ. ಆದರೆ, ನಮ್ಮದೇ ಜನರು ಮತ್ತು ಗಡಿಗಳನ್ನು ರಕ್ಷಿಸುತ್ತಾ ನಾವು ಅದನ್ನು ಮಾಡುತ್ತೇವೆ. ಅಮೆರಿಕ ಯಾವತ್ತೂ ಮುಕ್ತ ನೆಲವಾಗಿತ್ತು ಮತ್ತು ವೀರರ ನೆಲೆಯಾಗಿತ್ತು’’ ಎಂದು ಅಪರೂಪದ ಲಿಖಿತ ಹೇಳಿಕೆಯೊಂದರಲ್ಲಿ ಟ್ರಂಪ್ ಹೇಳಿದ್ದಾರೆ.
‘‘ಸ್ಪಷ್ಟವಾಗಿ ಹೇಳಬೇಕೆಂದರೆ ಇದು ಮುಸ್ಲಿಮ್ ನಿಷೇಧವಲ್ಲ. ಮಾಧ್ಯಮಗಳು ತಪ್ಪಾಗಿ ವರದಿ ಮಾಡುತ್ತಿವೆ. ಇದು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಇದು ಭಯೋತ್ಪಾದನೆ ಮತ್ತು ನಮ್ಮ ದೇಶವನ್ನು ಸುರಕ್ಷಿತವಾಗಿ ಇಡುವುದಕ್ಕೆ ಸಂಬಂಧಿಸಿದ್ದಾಗಿದೆ’’ ಎಂದು ಹೇಳಿದ್ದಾರೆ.
40 ಮುಸ್ಲಿಮ್ ದೇಶಗಳಿಗೆ ತನ್ನ ಆದೇಶದಿಂದ ಏನೂ ಬಾಧಕವಾಗಿಲ್ಲ ಎಂದಿದ್ದಾರೆ.





