ಡಿಡಿಸಿಎಯಿಂದ ಮಾನನಷ್ಟ ದೂರು ಕೇಜ್ರಿ,ಕೀರ್ತಿ ಆಝಾದ್‌ಗೆ ಸಮನ್ಸ್

ಹೊಸದಿಲ್ಲಿ,ಜ.30: ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಘ (ಡಿಡಿಸಿಎ) ಮತ್ತು ಅದರ ಉಪಾಧ್ಯಕ್ಷ ಚೇತನ್ ಚವ್ಹಾಣ್ ಅವರು ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ದೂರಿಗೆ ಸಂಬಂಧಿಸಿದಂತೆ ಇಲ್ಲಿಯ ಮಹಾನಗರ ನ್ಯಾಯಾಲಯವು ಸೋಮವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ಮತ್ತು ಅಮಾನತುಗೊಂಡಿರುವ ಬಿಜೆಪಿ ಸಂಸದ ಕೀರ್ತಿ ಆಝಾದ್ ಅವರಿಗೆ ಸಮನ್ಸ್ ಹೊರಡಿಸಿದೆ. ಈ ಇಬ್ಬರೂ ನೀಡಿರುವ ಹೇಳಿಕೆಗಳಿಂದ ಸಂಘ ಮತ್ತು ಅದರ ಪದಾಧಿಕಾರಿಗಳ ಗೌರವಕ್ಕೆ ಹಾನಿಯುಂಟಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಕೇಜ್ರಿವಾಲ್ ಅವರು ಕೇವಲ ವದಂತಿಗಳ ಆಧಾರದಲ್ಲಿ ಅನಾಮಿಕ ಮಹಿಳೆಯೋರ್ವಳ ಮಗನನ್ನು ಡಿಡಿಸಿಎ ಕ್ರಿಕೆಟ್ ತಂಡಕ್ಕೆ ಸೇರಿಸಿಕೊಳ್ಳಲು ಅದರ ಪದಾಧಿಕಾರಿಯೋರ್ವರು ಆಕೆಯಿಂದ ಲೈಂಗಿಕ ಸುಖವನ್ನು ಕೇಳಿದ್ದರೆಂಬ ‘ಗಂಭೀರ ಮಾನಹಾನಿಕರ ಹೇಳಿಕೆ ’ಯನ್ನು ನೀಡಿದ್ದರು ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದಿರುವ ನ್ಯಾ.ಅಭಿಲಾಷ್ ಮಲ್ಹೋತ್ರಾ ಅವರು, ಫೆ.18ರೊಳಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಮನ್ಸ್‌ನಲ್ಲಿ ಸೂಚಿಸಿದ್ದಾರೆ.
Next Story





