ಸಾಮಾಜಿಕ ಜಾಲ ತಾಣದಲ್ಲಿ ಇಸ್ಲಾಂ ಮತ್ತು ಪ್ರವಾದಿಯ ಅವಹೇಳನ:
ಕ್ರಮಕ್ಕೆ ಒತ್ತಾಯ
ಚಿಕ್ಕಮಗಳೂರು ಜ.30: ಪ್ರವಾದಿ ಮುಹಮ್ಮದ್‌ರ ಕುರಿತಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿಯಾಗಿ ವೀಡಿಯೊ ಮಾಡಿ ಬಿತ್ತರಿಸಿ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸುವಂತೆ ಮಾಡಿರುವ ಕೃತ್ಯದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಇತ್ತೆಹಾದ್ ನೌಜವಾನ್ ಕಮಿಟಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಗೃಹ ಇಲಾಖೆಗೆ ಸೋಮವಾರ ಮನವಿ ಸಲ್ಲಿಸಿದರು.
ಆಶು ಪರಿಹಾರ(ಗಿನ್ನಿ) ಎಂಬ ಯುವತಿಯು ಹೌಸ್ ನಂ.104 ಗಲ್ಲಿ ನಂ.3, ತುಕ್ ಮೀರ್‌ಪುರ್, ಪುಸ್ತ ರೋಡ್, ಬಿಹಾರಿ ಪುರ್ ಗ್ರಾಮ, ಖಜೂರಿ ಕ್ರಾಸ್, ದಿಲ್ಲಿ-110094 ವಿಳಾಸದಲ್ಲಿ ವಾಸವಾಗಿರುವ ಮಾಹಿತಿ ಇದೆ. ಈಕೆಯು ಸಾಮಾಜಿಕ ಜಾಲ ತಾಣದಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ ಪ್ರವಾದಿ ಮುಹಮ್ಮದ್(ಸ.ಅ) ಹಾಗೂ ಅವರ ಮಡದಿಯಾದ ಆಯಿಷಾ(ರ.ಅ) ಅವರ ಮೇಲೆ ಅವಹೇಳನಕಾರಿಯಾಗಿ ಸುದ್ದಿ ಪ್ರಕಟಿಸಿದ್ದಾರೆ ಎಂದು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಈಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಬೇಕು. ಅಲ್ಲದೇ ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರವನ್ನು ವಹಿಸಬೇಕು. ಈ ಸಮಯದಲ್ಲಿ ಇತ್ತೆಹಾದ್ ನೌಜವಾನ್ ಕಮಿಟಿ ಅಧ್ಯಕ್ಷ ತಬ್ರೀಸ್, ಮುಖಂಡರಾದ ಆರೀಫ್, ಜಿಶಾನ್, ಅಝರ್ ಪಾಷಾ, ಅಜ್ಮಲ್, ಅಕ್ರಂ, ತನ್ವೀರ್ ಅಹ್ಮದ್, ಆಲಂ, ಅಮೀನ್ ಮತ್ತಿತರರಿದ್ದರು.





