ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ: ಪತಿ ಮೃತ್ಯು
ಪತ್ನಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು
ಕಾಸರಗೋಡು, ಜ.30: ಮಗಳಿಗೆ ವಿಷನೀಡಿ ದಂಪತಿ ವಿಷ ಸೇವಿಸಿದ ಘಟನೆಯೊಂದು ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ರವಿವಾರ ಸಂಜೆ ನಡೆದಿದ್ದು, ಪತಿ ಮೃತಪಟ್ಟು, ಪತ್ನಿ ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು, ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೇಳಪೆರಿಯಡ್ಕದ ಬಾಬುಪಾಟಾಳಿ(65) ಮೃತಪಟ್ಟವರು. ಪತ್ನಿ ಲೀಲಾವತಿ(60) ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಪುತ್ರಿ ನಿರ್ಮಲಾ ಕೆಲವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದು ಮೊದಲು ಮಗಳಿಗೆ ವಿಷ ನೀಡಿ ಬಳಿಕ ಇಬ್ಬರೂ ವಿಷ ಸೇವಿಸಿರಬಹುದೆಂದು ಶಂಕಿಸಲಾಗಿದೆ. ಆದರೆ ನಿರ್ಮಲಾ ವಿಷ ಸೇವಿಸದಿರುವುದರಿಂದ ಅಪಾಯದಿಂದ ಪಾರಾಗಿದ್ದಾರೆೆ.
ತಡವಾಗಿ ಈ ಕೃತ್ಯ ಬೆಳಕಿಗೆ ಬಂದಿದ್ದು, ನೆರೆಮನೆಯವರು ಗಮನಿಸಿ ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಬಾಬುಪಾಟಾಳಿ ಮೃತಪಟ್ಟಿದ್ದಾರೆ. ಕೃತ್ಯ ನಡೆಯುವ ಸಂದರ್ಭ ಪುತ್ರ ಹರೇಶ್ ಮನೆಯಲ್ಲಿರಲಿಲ್ಲ. ಇನ್ನೋರ್ವ ಪುತ್ರಿ ಸುನಿತಾ ವಿವಾಹವಾಗಿ ಪತಿ ಮನೆಯಲ್ಲಿದ್ದಾರೆ.
ಮೂಲತಃ ಕರ್ನಾಟಕ ಅರ್ಲಪದವು ಒಡ್ಯದವರಾದ ಇವರು ಮೂರು ವರ್ಷಗಳ ಹಿಂದೆ ಬೇಳಕ್ಕೆ ಬಂದು ನೆಲೆಸಿದ್ದರು.
ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







