ಸೈಬರ್ ಕ್ರೈಂ: ಹೈಕೋರ್ಟ್ ಸೂಚನೆ
ಮುಂಬೈ, ಜ.30: ಸೈಬರ್ ಅಪರಾಧ ಮತ್ತು ಆಕ್ಷೇಪಣಾರ್ಹ ಕಾರ್ಯ ನಿರ್ವಹಿಸುತ್ತಿರುವ ವೆಬ್‌ಸೈಟ್‌ಗಳು ಸಮಾಜಕ್ಕೆ ಬಲುದೊಡ್ಡ ಕಂಟಕವಾಗಿದ್ದು ಇವನ್ನು ನಿರ್ವಹಿಸುವಲ್ಲಿ ಮತ್ತು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. ಒಡನಾಡಿ ಸೇವೆ ಎಂಬ ಹೆಸರಿನಲ್ಲಿ ಸೆಕ್ಸ್ ಜಾಲ ನಡೆಸುತ್ತಿರುವ ಅಂತರ್ಜಾಲ ವೆಬ್‌ಸೈಟ್ ಒಂದರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅಲಿ ಅಹ್ಮದ್ ಸಿದ್ದಿಕಿ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭ ಮುಖ್ಯ ನ್ಯಾಯಾಧೀಶೆ ಮಂಜುಳಾ ಚೆಲ್ಲೂರ್ ಮತ್ತು ಜಿ.ಎಸ್.ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವೊಂದು ಈ ಸೂಚನೆ ನೀಡಿದೆ.
ಈ ವೇಳೆ ಮಾಹಿತಿ ನೀಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ ಕಾಂಥರಿಯಾ, ಸಿಟಿ ಪೊಲೀಸ್‌ನ ಸೈಬರ್ ಅಪರಾಧ ವಿಭಾಗವು ಇದುವರೆಗೆ ಇಂತಹ 200 ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಿದೆ ಎಂದು ತಿಳಿಸಿದರು. ಇದು ಪ್ರಶಂಸಾರ್ಹ ಕಾರ್ಯ ಎಂದ ಹೈಕೋರ್ಟ್, ಆದರೆ ಪೊಲೀಸರು ಅಪರಾಧ ಘಟಿಸುವ ಮುನ್ನವೇ ಈ ಬಗ್ಗೆ ಕಾರ್ಯತತ್ಪರರಾಗಿ ಅಪರಾಧ ತಡಗಟ್ಟಬೇಕು ಎಂದು ತಿಳಿಸಿತು. ಈ ಪ್ರಕರಣದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಪ್ರತೀ ತಿಂಗಳೂ ತನಗೆ ವರದಿ ಸಲ್ಲಿಸುವಂತೆ ಕೋರ್ಟ್ ತಿಳಿಸಿತು.







