ನಿಕಟ ಕಾಳಗದಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈದಿದ್ದ ಮೇಜರ್ ಸುರಿ
ಸರ್ಜಿಕಲ್ ದಾಳಿಯ ಇನ್ನಷ್ಟು ಮಾಹಿತಿ ನೀಡಿದ ಸೇನೆ
ಹೊಸದಿಲ್ಲಿ, ಜ.30: ಕಳೆದ ಸೆಪ್ಟ್ಟಂಬರ್ 29ರಂದು ಭಾರತದ ಸೇನೆಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ನಡೆಸಿದ್ದ ‘ಸರ್ಜಿಕಲ್ ದಾಳಿ’ಯ ಬಗ್ಗೆ ಹೆಚ್ಚಿನ ವಿವರವನ್ನು ಇದೀಗ ಸೇನಾ ಮೂಲಗಳು ಬಹಿರಂಗಗೊಳಿಸಿವೆ. ಸೇನೆಯ ಮೂಲಗಳು ತಿಳಿಸಿರುವ ಪ್ರಕಾರ, ಕಾಶ್ಮೀರದ ಗಡಿನಿಯಂತ್ರಣಾ ರೇಖೆಯುದ್ದಕ್ಕೂ ಇದ್ದ ಭಯೋತ್ಪಾದಕರ ನೆಲೆಯನ್ನು ನಾಶಗೊಳಿಸುವ ಉದ್ದೇಶದ ಕಾರ್ಯಾಚರಣೆಯಲ್ಲಿ ಮೇಜರ್ ರೋಹಿತ್ ಸುರಿ ಅವರು ‘ಮಿಷನ್ ಲೀಡರ್’ ಆಗಿದ್ದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುರುತಿಸಲಾದ ಗುರಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಈ ಗೋಪ್ಯ ಕಾರ್ಯಾಚರಣೆಯ ನೀಲಿನಕಾಶೆ ರೂಪಿಸಿದ್ದರು. ಸರ್ಜಿಕಲ್ ದಾಳಿಯಲ್ಲಿ ಒಂದು ತಂಡದ ನೇತೃತ್ವ ವಹಿಸಿದ್ದ ಮೇಜರ್ ಸೂರಿ, ದಾಳಿಯ ಮುಂಚೂಣಿಯಲ್ಲಿದ್ದು ಆರಂಭಿಕ ಹಂತದಲ್ಲಿ ಇಬ್ಬರು ಕಾವಲುಯೋಧರ ಸದ್ದಡಗಿಸಿದ್ದರು. ಬಳಿಕ ಮುಂದುವರಿದು ಇನ್ನಿಬ್ಬರನ್ನು ಹತ್ಯೆ ಮಾಡಿ, ತಂಡವು ನಿರಾಯಾಸವಾಗಿ ಗುರಿಯೆಡೆಗೆ ಸಾಗಲು ಅನುಕೂಲ ಮಾಡಿಕೊಟ್ಟಿದ್ದರು. ತಮ್ಮ ಗುರಿಯೆಡೆಗೆ ನುಸುಳಿ ಸಾಗಿ ಅಲ್ಲಿ ಕಾರ್ಯಾಚರಣೆ ಮುಗಿಸಿದ ಬಳಿಕ ಮತ್ತೆ ಒಂದೆಡೆ ಸಮಾಗಮಗೊಳ್ಳಲು ನಿರ್ದಿಷ್ಟ ಸ್ಥಳವೊಂದನ್ನು ಗುರುತಿಸಲಾಗಿತ್ತು. ಅಗತ್ಯ ಬಿದ್ದರೆ ಅಳವಡಿಸಿಕೊಳ್ಳಲು ಎದುರಾಳಿಗಳ ದಾರಿ ತಪ್ಪಿಸುವ ತಂತ್ರಗಳನ್ನೂ ರೂಪಿಸಲಾಗಿತ್ತು. ಕಮಾಂಡೋ ನೆಲೆಯನ್ನು ಸ್ಥಾಪಿಸಿದ ಬಳಿಕ ಯೋಧರು ಪೂರ್ವ ನಿರ್ಧರಿತ ತಂಡಗಳಾಗಿ ಪ್ರತ್ಯೇಕಿಸಲ್ಪಟ್ಟರು. ಉದ್ದೇಶಿತ ಗುರಿಯು(ಭಯೋತ್ಪಾದಕರು) ತಪ್ಪಿಸಿಕೊಳ್ಳಬಹುದಾದ ಹಾಗೂ ಭಯೋತ್ಪಾದಕರು ಮರಳಿ ಸಂಘಟಿತರಾಗಿ ಆಕ್ರಮಣ ನಡೆಸಬಹುದಾದ ಸಂಭಾವ್ಯ ದಾರಿಗಳನ್ನು ಒಂದು ತಂಡವು ತಡೆಹಿಡಿದಿತ್ತು. ಇನ್ನೊಂದು ತಂಡವು ‘ಸ್ಫೋಟ ನೆಲೆ’ಯನ್ನು ಸ್ಥಾಪಿಸಿತ್ತು. ಇಲ್ಲಿಂದ ರಾಕೆಟ್‌ನಿಂದ ಉಡಾಯಿಸಬಹುದಾದ ಗ್ರೆನೇಡ್‌ಗಳನ್ನು , ಮೋರ್ಟರ್‌ಗಳನ್ನು, ಕ್ಷಿಪಣಿಗಳನ್ನು ಬಳಸಲು ಸಾಧ್ಯವಿತ್ತು. ಪ್ರಥಮ ತಂಡವು ಹಾದು ಹೋದ ಮೇಲೆ, ಆ ಪ್ರದೇಶವನ್ನು ಧ್ವಂಸ ಮಾಡಲು , ಅಪಾಯದಲ್ಲಿ ಸಿಲುಕಿದ್ದ ಯೋಧರನ್ನು ಪಾರು ಮಾಡಲು ಹಾಗೂ ಅಗತ್ಯ ಬಿದ್ದರೆ ದಾಳಿ ಮಾಡಲು ಈ ತಂಡ ಸರ್ವ ಸಜ್ಜಿತವಾಗಿತ್ತು. ಮೇಜರ್ ಸೂರಿ ಆಕ್ರಮಣ ತಂಡವೊಂದರ ನೇತೃತ್ವ ವಹಿಸಿದ್ದರು. ಈ ತಂಡ ನಿಶ್ಯಬ್ದವಾಗಿ ವೈರಿಗಳ ಕೇಂದ್ರದ ಒಳಗೆ ನುಸುಳಿ ಭಯೋತ್ಪಾದಕರ ನೆಲೆಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿತ್ತು. ಇಲ್ಲಿ ಇವರಿಗೆ ಪಾಕ್ ಸೇನೆಯ ಬೆಂಬಲ ಪಡೆದ ಭಯೋತ್ಪಾದಕರು ಇದಿರಾಗಿದ್ದರು. ಮೇಜರ್ ಸೂರಿಯವರ ತಂಡ ಒಟ್ಟು 10 ಉಗ್ರರನ್ನು ಹತ್ಯೆ ಮಾಡಿದ್ದರು. ಆ ಬಳಿಕ, ಭಯೋತ್ಪಾದಕರ ಏರು ನೆಲೆಯನ್ನು ಧ್ವಂಸಗೊಳಿಸುವಂತೆ ‘ಸ್ಫೋಟ ನೆಲೆ’ಗೆ ಸೂಚಿಸಲಾಗಿತ್ತು. ಬಳಿಕ ತಂಡದ ಸದಸ್ಯರು ಸಮಾಗಮ ಸ್ಥಳದಲ್ಲಿ ಒಟ್ಟು ಸೇರಿ ತಮ್ಮ ನೆಲೆಯತ್ತ ವಾಪಸಾಗಿದ್ದರು. ಸರ್ಜಿಕಲ್ ದಾಳಿಯಲ್ಲಿ ಪಾಲ್ಗೊಂಡಿದ್ದ 22 ಯೋಧರನ್ನು ಗಣರಾಜ್ಯೋತ್ಸವ ಸಂದರ್ಭದಲ್ಲಿ ಗೌರವಿಸಲಾಗಿತ್ತು. ಮೇಜರ್ ರೋಹಿತ್ ಸೂರಿಯವರಿಗೆ ಎರಡನೇ ಅತ್ಯುಚ್ಚ ಸೇನಾ ಗೌರವ ಕೀರ್ತಿ ಚಕ್ರ ನೀಡಿ ಗೌರವಿಸಲಾಗಿತ್ತು.





