ಜಿಯೋ ಉಚಿತ ಸೇವೆಗೆ ಮತ್ತೆ ಬಂದಿದೆ ಸಂಚಕಾರ
ಹೊಸದಿಲ್ಲಿ,ಜ.30: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಉಚಿತ ಕೊಡುಗೆಯನ್ನು ಮುಂದುವರಿಸಲು ಅನುಮತಿ ನೀಡುವ ಮೂಲಕ ಅದು ತನ್ನ ದರ ಆದೇಶಗಳು, ನಿರ್ದೇಶಗಳು ಮತ್ತು ನಿಯಮಗಳನ್ನು ರಾಜಾರೋಷ ಉಲ್ಲಂಘಿಸುತ್ತಿದ್ದರೂ ತಡೆಯುವಲ್ಲಿ ಟ್ರಾಯ್ ವಿಫಲಗೊಂಡಿದೆ ಎಂದು ಆರೋಪಿಸಿ ವೊಡಾಫೋನ್ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ. ಇದು ಜಿಯೋ ಗ್ರಾಹಕರು ಕಳೆದ ನಾಲ್ಕು ತಿಂಗಳುಗಳಿಂದಲೂ ಪಡೆಯುತ್ತಿರುವ ಉಚಿತ ಸೇವೆಗೆ ಅಡ್ಡಿಯನ್ನುಂಟು ಮಾಡಬಹುದು.
ನ್ಯಾ.ಸಂಜೀವ ಸಚ್‌ದೇವ ಅವರು ಫೆ.1ರಂದು ಅರ್ಜಿಯ ವಿಚಾರಣೆಯನ್ನು ನಡೆಸಲಿದ್ದಾರೆ.
ಎಲ್ಲ ದರಗಳು ಅಂತರ್-ಸಂಪರ್ಕ ಬಳಕೆ ಶುಲ್ಕ (ಐಯುಸಿ)ಗಳಿಗೆ ಅನುಗುಣ ವಾಗಿರಬೇಕು ಎನ್ನುವುದನ್ನು ಕಡ್ಡಾಯಗೊಳಸಿರುವ ದೂರಸಂಪರ್ಕ ಇಲಾಖೆ (ಡಾಟ್) ಯ ಆದೇಶಗಳನ್ನು ಜಾರಿಗೊಳಿಸುವಲ್ಲಿಯೂ ಟ್ರಾಯ್ ವಿಫಲಗೊಂಡಿದೆ ಎಂದೂ ವೊಡಾಫೋನ್ ಪ್ರತಿಪಾದಿಸಿದೆ.
ಯಾವುದೇ ಉತ್ತೇಜಕ ಕೊಡುಗೆಗಳು ಗರಿಷ್ಠ 90 ದಿನಗಳ ಮಿತಿಯನ್ನು ಮೀರುವಂತಿಲ್ಲ ಎಂದು ಖುದ್ದು ಟ್ರಾಯ್ 2002ರಲ್ಲಿ ಎಲ್ಲ ದೂರಸಂಪರ್ಕ ಕಂಪೆನಿಗಳಿಗೆ ನಿರ್ದೇಶ ನೀಡಿತ್ತು ಎನ್ನುವುದನ್ನು ತನ್ನ ಅರ್ಜಿಯಲ್ಲಿ ಬೆಟ್ಟು ಮಾಡಿರುವ ವೊಡಾಫೋನ್, ರಿಲಯನ್ಸ್ಸ್ ಜಿಯೊ ನೀಡಿರುವ ಉಚಿತ ಕೊಡುಗೆಯು ಇದನ್ನು ಉಲ್ಲಂಘಿಸಿದೆ. ಉಚಿತ ಕೊಡುಗೆಯ 90 ದಿನಗಳ ಅವಧಿ ಎಂದೋ ಅಂತ್ಯಗೊಂಡಿದೆ. ತಾನು ಈ ಬಗ್ಗೆ ಮನವಿಗಳನ್ನು ಮಾಡಿಕೊಂಡಿದ್ದರೂ ಟ್ರಾಯ್ ಅವುಗಳನ್ನು ಕಡೆಗಣಿಸಿದೆ ಎಂದು ಆರೋಪಿಸಿದೆ.







