ಭಿನ್ನಾಭಿಪ್ರಾಯ ಇದ್ದರೂ ಸಂಸತ್ ಕಾರ್ಯನಿರ್ವಹಿಸಬೇಕು: ಮೋದಿ
ಹೊಸದಿಲ್ಲಿ, ಜ.30: ಸಂಸತ್ ಎಂದರೆ ಅದೊಂದು ಮಹಾ ಪಂಚಾಯತ್ ಇದ್ದಂತೆ. ಭಿನ್ನಾಭಿಪ್ರಾಯ ಇದ್ದರೂ ಸಂಸತ್ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದು , ಮುಂಬರುವ ಬಜೆಟ್ ಅಧಿವೇಶನ ಸುಸೂತ್ರವಾಗಿ ಸಾಗಲು ಎಲ್ಲಾ ಪಕ್ಷಗಳ ಸಹಕಾರ ಕೋರಿದರು. ಬಜೆಟ್ ಅಧಿವೇಶನದ ಮುನ್ನಾ ದಿನ ಸರಕಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ , ಅಧಿವೇಶನದ ಯಶಸ್ಸಿಗೆ ಪ್ರತಿಪಕ್ಷಗಳ ಸಹಕಾರ ಕೋರಿದರು. ನೋಟು ಅಮಾನ್ಯಗೊಳಿಸಿದ ಕಾರಣ ಮತ್ತು ಚಿಟ್‌ಫಂಡ್ ಹಗರಣದಲ್ಲಿ ಪಕ್ಷದ ಶಾಸಕರನ್ನು ಬಂಧಿಸಿರುವುದರಿಂದ ಅಸಮಾಧಾನಗೊಂಡಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಹೊರತುಪಡಿಸಿ ಉಳಿದೆಲ್ಲಾ ಪ್ರತಿಪಕ್ಷಗಳು ಸಭೆಯಲ್ಲಿ ಪಾಲ್ಗೊಂಡಿದ್ದವು. ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯನ್ನು ಹಿಂದೂಡಬೇಕು ಎಂಬ ವಿಪಕ್ಷಗಳ ಮನವಿಯನ್ನು ತಿರಸ್ಕರಿಸಿದ ಸರಕಾರ, ಈಗಾಗಲೇ ನಿರ್ಧರಿತವಾದಂತೆಯೇ ಬಜೆಟ್ ಮಂಡನೆಯಾಗಲಿದೆ . ಈ ಕುರಿತು ಸುಪ್ರೀಂಕೋರ್ಟ್ ಮತ್ತು ಚುನಾವಣಾ ಆಯೋಗ ತಮ್ಮ ತೀರ್ಪು ನೀಡಿವೆ ಎಂದು ಸ್ಪಷ್ಟಪಡಿಸಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತಕುಮಾರ್, ಚುನಾವಣೆ ಸಮಯವಾದ್ದರಿಂದ ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಸಂಸತ್ ಎಂಬುದು ಮಹಾಪಂಚಾಯತ್ ಇದ್ದಂತೆ. ಅದು ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ವಿಪಕ್ಷಗಳಿಗೆ ಮನವಿ ಮಾಡಿಕೊಂಡರು . ಇದಕ್ಕೆ ಎಲ್ಲಾ ಪ್ರತಿಪಕ್ಷಗಳು ಸಮ್ಮತಿ ಸೂಚಿಸಿದವು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕನಾಗಿರುವ ಗುಲಾಂ ನಬಿ ಆಝಾದ್, ಫೆ.1ರಂದು ಬಜೆಟ್ ಮಂಡಿಸುವ ಸರಕಾದ ನಿರ್ಧಾರವನ್ನು ಟೀಕಿಸಿದರು. ಈ ಹಿಂದೆ 2012ರಲ್ಲಿ ಯುಪಿಎ ಸರಕಾರ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಯನ್ನು ಹಿಂದೂಡಿತ್ತು ಎಂದು ತಿಳಿಸಿದ ಅವರು, ಚುನಾವಣೆಯ ಮೇಲೆ ಪ್ರಭಾವ ಬೀರುವ ಘೋಷಣೆಗಳನ್ನು ಬಜೆಟ್‌ನಲ್ಲಿ ಸೇರಿಸಬಾರದು ಎಂದು ಕೇಂದ್ರ ಸರಕಾರವನ್ನು ಕೇಳಿಕೊಂಡಿದ್ದೇವೆ ಎಂದರು. ಅಧಿವೇಶನದ ಪ್ರಥಮ ಹಂತದಲ್ಲಿ ನೋಟು ರದ್ದತಿ ಕುರಿತು ಚರ್ಚೆ ನಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸಿಪಿಐ(ಎಂ) ಮುಖಂಡ ಸೀತಾರಾಮ್ ಯೆಚೂರಿ ಒತ್ತಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧಿಯಾ, ನೋಟು ರದ್ದತಿ ಎಂಬ ಸರಕಾರದ ಅಸಂಬದ್ಧ ನಡೆಯಿಂದಾಗಿ ದೇಶದಾದ್ಯಂತದ ಜನತೆ ತೊಂದರೆಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಎರಡು ದಿನ ಚರ್ಚೆ ನಡೆಯಬೇಕು ಎಂದರು. ಅಲ್ಲದೆ, ಮೂರನೇ ತ್ರೈಮಾಸಿಕ ಅವಧಿಯ ಅಂಕಿ ಅಂಶಗಳ ಮಾಹಿತಿ ಫೆಬ್ರವರಿ ಮಧ್ಯಭಾಗದಲ್ಲಿ ಲಭಿಸುವ ಕಾರಣ ಫೆ.1ರಂದು ಬಜೆಟ್ ಮಂಡಿಸುವುದು ಅವೈಜ್ಞಾನಿಕ ಕ್ರಮ ಎಂದು ಸಿಂಧಿಯಾ ಹೇಳಿದರು.







