ಬನ್ಸಾಲಿ ಮೇಲಿನ ಹಲ್ಲೆ ಸಮರ್ಥಿಸಲು ಪ್ರವಾದಿ ಹೆಸರು ಎಳೆದ ಕೇಂದ್ರ ಸಚಿವ

ಹೊಸದಿಲ್ಲಿ, ಜ.31: ತಮ್ಮ ವಿವಾದಿತ ಹೇಳಿಕೆಗಳಿಂದ ಹಲವಾರು ಬಾರಿ ಸುದ್ದಿಯಾಗಿರುವ ಕೇಂದ್ರ ಸಹಾಯಕ ಸಚಿವ ಗಿರಿರಾಜ್ ಸಿಂಗ್ ಈ ಬಾರಿ ಬನ್ಸಾಲಿ ಹಲ್ಲೆ ವಿಚಾರವಾಗಿ ಹೇಳಿಕೆ ನೀಡಿ ಮತ್ತೆ ವಿವಾದಕ್ಕೀಡಾಗಿದ್ದಾರೆ.
ಚಿತ್ರ ನಿರ್ಮಾತೃ ಸಂಜಯ್ ಲೀಲಾ ಬನ್ಸಾಲಿಯ ಮೇಲಿನ ಹಲ್ಲೆಯನ್ನು ಸಮರ್ಥಿಸುವ ಭರದಲ್ಲಿ ಪ್ರವಾದಿ ಮುಹಮ್ಮದ್(ಸ.) ಹೆಸರು ಎಳೆದು ತಂದ ಸಚಿವ, ‘‘ರಾಣಿ ಪದ್ಮಾವತಿ ಒಬ್ಬಳು ಹಿಂದೂ ಆಗಿರುವುದರಿಂದ ಆಕೆಯ ಬಗೆಗಿನ ಇತಿಹಾಸವನ್ನು ತಿರುಚಿ ಬಿಂಬಿಸಲಾಗುತ್ತಿದೆ. ಚಿತ್ರ ನಿರ್ಮಾಪಕರು ಇದೇ ಧೈರ್ಯವನ್ನು ಪ್ರವಾದಿ ಮುಹಮ್ಮದ್ ಅವರ ಬಗೆಗಿನ ಚಿತ್ರ ಮಾಡಲು ತೋರಿಸುತ್ತಿಲ್ಲ’’ ಎಂದಿದ್ದಾರೆ.
ಭಾರತೀಯ ಇತಿಹಾಸದೊಂದಿಗೆ ಚೆಲ್ಲಾಟವಾಡುವ ಮಂದಿಗೆ ಜನರೇ ಶಿಕ್ಷೆ ನೀಡಬೇಕಾಗಿದೆ ಎಂದು ಹೇಳಿ ಸಿಂಗ್ ಬನ್ಸಾಲಿ ಮೇಲಿನ ಹಲ್ಲೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಖಾದಿ ಗ್ರಾಮೋದ್ಯೋಗ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೇಲಿನಂತೆ ಗಿರಿರಾಜ್ ಸಿಂಗ್ ಹೇಳಿದ್ದಾರೆ.
‘‘ಔರಂಗಜೇಬ್, ಟಿಪ್ಪು ಸುಲ್ತಾನ್ ಅವರಂಥವರನ್ನು ಐಕಾನ್ ಎಂದು ತಿಳಿಯುವ ಜನ ದೇಶದ ಇತಿಹಾಸದೊಂದಿಗೆ ಚೆಲ್ಲಾಟವಾಡುತ್ತಿರುವುದು ದೇಶದ ಪಾಲಿನ ದೌರ್ಭಾಗ್ಯವೇ ಸರಿ’’ ಎಂದ ಅವರು, ‘‘ಪದ್ಮಾವತಿ ಒಬ್ಬಳು ಹಿಂದೂ ಅಲ್ಲದೇ ಹೋಗಿದ್ದರೆ ಯಾರೂ ಅವಳ ಬಗೆಗೆ ಈ ರೀತಿ ಚಿತ್ರವೊಂದನ್ನು ತಯಾರಿಸುವ ಧೈರ್ಯ ತೋರಿಸುತ್ತಿರಲಿಲ್ಲ’’ ಎಂದು ಹೇಳಿಕೊಂಡಿದ್ದಾರೆ.
‘‘ಹಿಂದೂ ದೇವ ದೇವತೆಗಳ ಬಗ್ಗೆ ಟೀಕೆಗಳು ಬರುತ್ತಲೇ ಇರುತ್ತವೆ. ಪೀಕೆಯಂತಹ ಚಿತ್ರಗಳನ್ನೂ ತಯಾರಿಸುತ್ತಾರೆ. ಮುಹಮ್ಮದ್ ಸಾಹೇಬ್ ಅವರ ವಿರುದ್ಧ ಚಿತ್ರ ತಯಾರಿಸುವ ಧೈರ್ಯ ಯಾರಿಗಾದರೂ ಇದೆಯೇನು?’’ ಎಂದು ಸಿಂಗ್ ಪ್ರಶ್ನಿಸಿದ್ದಾರೆ.







