ಲಾತೂರು ಮಿಲ್ ದುರಂತ:ನಾಲ್ವರ ಬಂಧನ,ಮೃತರ ಸಂಖ್ಯೆ 9ಕ್ಕೇರಿಕೆ

ಮುಂಬೈ,ಜ.31: ಟ್ಯಾಂಕೊಂದರಲ್ಲಿ ಇನ್ನೆರಡು ಶವಗಳು ಪತ್ತೆಯಾಗುವುದರೊಂದಿಗೆ ಮಹಾರಾಷ್ಟ್ರದ ಲಾತೂರಿನ ಎಣ್ಣೆ ಮಿಲ್‌ನಲ್ಲಿ ಸಂಭವಿಸಿದ ಅವಘಡದಲ್ಲಿ ಸತ್ತವರ ಸಂಖ್ಯೆ ಒಂಭತ್ತಕ್ಕೇರಿದೆ. ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಲಾತೂರಿನ ಕೀರ್ತಿ ಆಯಿಲ್ ಮಿಲ್‌ನಲ್ಲಿ ನಿನ್ನೆ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ವಿಷಾನಿಲ ಸೇವನೆಯಿಂದ ಏಳು ಕಾರ್ಮಿಕರು ಮೃತರಾಗಿದ್ದರು. ತಡರಾತ್ರಿ ಇನ್ನೆರಡು ಶವಗಳನ್ನು ಪತ್ತೆ ಹಚ್ಚಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಂದು ನಸುಕಿನ ಮೂರು ಗಂಟೆಯ ಸುಮಾರಿಗೆ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು.
ಆರಂಭದಲ್ಲಿ ಸ್ವಚ್ಛತಾ ಕಾರ್ಯಕ್ಕೆಂದು ಟ್ಯಾಂಕಿನಲ್ಲಿ ಇಳಿದಿದ್ದ ಕೆಲವು ಕಾರ್ಮಿಕರು ವಿಷಾನಿಲ ಸೇವನೆಯಿಂದ ಪ್ರಜ್ಞಾಹೀನರಾಗಿದ್ದರು. ಪರಿಶೀಲಿಸಲೆಂದು ಇನ್ನಷ್ಟು ಕಾರ್ಮಿಕರು ಟ್ಯಾಂಕಿನಲ್ಲಿಳಿದಿದ್ದು, ಅವರೂ ಸೇರಿದಂತೆ ವಿಷಾನಿಲಕ್ಕೆ ಒಂಭತ್ತು ಜೀವಗಳು ಬಲಿಯಾಗಿವೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಓರ್ವ ಕಾರ್ಮಿಕನನ್ನು ರಕ್ಷಿಸಿ ಲಾತೂರಿನ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯ ಕಾರ್ಮಿಕ ಸಚಿವ ಸಂಭಾಜಿ ಪಾಟೀಲ್ ನಿಲಂಗೇಕರ್ ಅವರು ತಡರಾತ್ರಿ ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದಾರೆ. ಮಿಲ್‌ನ್ನು ಮುಚ್ಚಲು ಅವರು ಅದೇಶಿಸಿದ್ದಾರೆ.
ಮಿಲ್‌ನ ಮಾಲಿಕ ಕೀರ್ತಿ ಭುತಾಡಾ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.







