ದೇವಿಗೆ ಬಲಿಯಾಗಲು ತನ್ನ ಕುತ್ತಿಗೆಯನ್ನೇ ಕತ್ತರಿಸಿಕೊಂಡ !

ರಾಂಚಿ,ಜ.31: ಬಿಹಾರದ ಹಿಂದು ಭಕ್ತನೋರ್ವ ಭಕ್ತಿಯ ಪರಾಕಾಷ್ಠತೆಯಲ್ಲಿ ಸ್ವತಃ ತನ್ನ ಕುತ್ತಿಗೆಯನ್ನೇ ಕತ್ತರಿಸಿಕೊಂಡು ದೇವಿಗೆ ತನ್ನ ಬಲಿಯನ್ನರ್ಪಿಸಿದ್ದಾನೆ. ಮಂಗಳವಾರ ಬೆಳಗಿನ ಜಾವ ಜಾರ್ಖಂಡ್‌ನ ರಾಜ್‌ರಪ್ಪಾದಲ್ಲಿರುವ ಪ್ರಸಿದ್ಧ ಚಿನ್ನಮಾಸ್ತಿಕಾ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.
ಬಿಹಾರದ ಬಕ್ಸರ್ ಜಿಲ್ಲೆಯ ನಿವಾಸಿ ಸಂಜಯ ನಾಥ್(35) ಬೆಳಿಗ್ಗೆ 6:20ರ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯ ಹೊರಗೆ ಚೂರಿಯಿಂದ ತನ್ನ ಕತ್ತನ್ನು ಕತ್ತರಿಸಿಕೊಂಡಿದ್ದಾನೆ. ರಕ್ತದ ಮಡುವಲ್ಲಿ ಕುಸಿದು ಬಿದ್ದ ಆತ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾನೆ.
ಸಾಂಪ್ರದಾಯಿಕ ವಿಧಿಗಳ ಬಳಿಕ ಬೆಳಿಗ್ಗೆ ಆರು ಗಂಟೆಗೆ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿತ್ತು. ನಾಥ್ ಸೇರಿದಂತೆ ಕೆಲವೇ ಭಕ್ತರು ಪೂಜೆ ಸಲ್ಲಿಸಲು ಒಳಗೆ ಪ್ರವೇಶಿಸಿದ್ದರು. ಪೂಜೆ ಮುಗಿಸಿದ ಬಳಿಕ ಗರ್ಭಗುಡಿಯಲ್ಲಿನ ದೇವಿಯ ವಿಗ್ರಹ ಸ್ಪಷ್ಟವಾಗಿ ತೋರುವ ಸ್ಥಳದಲ್ಲಿ ನಿಂತಿದ್ದ ಆತ ಕಣ್ಣುಗಳನ್ನು ಮುಚ್ಚಿಕೊಂಡು ಯಾವುದೋ ಮಂತ್ರವನ್ನು ಹೇಳಿಕೊಳ್ಳುತ್ತಿದ್ದ. ಈವೇಳೆ ಏಕಾಏಕಿಯಾಗಿ ತನ್ನ ಟವೆಲ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಚೂರಿಯನ್ನು ಹೊರತೆಗೆದು ಕತ್ತನ್ನು ಕತ್ತರಿಸಿಕೊಂಡ ಎಂದು ರಾಜ್‌ರಪ್ಪಾ ದೇವಸ್ಥಾನದ ಪಂಡಾಗಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಭಾಶಿಷ್ ಪಂಡಾ ಸುದ್ದಿಸಂಸ್ಥೆಗೆ ತಿಳಿಸಿದರು.







