ಫೆ.2ರಿಂದ ಅಲೋಶಿಯನ್ ಫೆಸ್ಟ್-2017
ಮಂಗಳೂರು, ಜ.31: ಸಂತ ಅಲೋಶಿಯಸ್ ಕಾಲೇಜಿನ 2016-17ನೆ ಸಾಲಿನ ವಾರ್ಷಿಕ ಮಹೋತ್ಸವ (ಅಲೋಶಿಯನ್ ಫೆಸ್ಟ್-2017)ವು ಫೆ.2ರಿಂದ 4ರವರೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಸಮಾರಂಭವು ಫೆ.2ರಂದು ಬೆಳಗ್ಗೆ 9ಕ್ಕೆ ನಡೆಯಲಿದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಸ್ವೀಬರ್ಟ್ ಡಿಸಿಲ್ವ ಎಸ್.ಜೆ. ತಿಳಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಲೋಶಿಯನ್ ಫೆಸ್ಟ್-2017ನಲ್ಲಿ ಎಂಟು ವಿಭಾಗಗಳಲ್ಲಿ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ. ಕಲಾ ವಿಭಾಗದಲ್ಲಿ ‘ನಿಸರ್ಗ’ ವಿಷಯಾಧಾರಿತ ಉತ್ಸವ, ವಿಜ್ಞಾನ ವಿಭಾಗದಲ್ಲಿ ‘ಸ್ವರ ಮೇಳಗಳ ಸಮ್ಮಿತಿ’ ಉತ್ಸವ, ವಾಣಿಜ್ಯ ವಿಭಾಗದಲ್ಲಿ ‘ಅನಿರೀಕ್ಷಿತವನ್ನು ನಿರೀಕ್ಷಿಸಿರಿ’ ಉತ್ಸವ, ವ್ಯವಹಾರ ವಿಭಾಗದಲ್ಲಿ ‘ಸರ್ಜ್’ ಉತ್ಸವ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ‘ಕಾನ್‌ಕ್ಲೇವ್ ಆಫ್ ಟೆಕ್ನೊಮೇನಿಯಂ’ ಉತ್ಸವ, ಸಾಂಸ್ಕೃತಿಕ ವಿಭಾಗದಲ್ಲಿ ‘ಅಸ್ತಿತ್ವ’ ಉತ್ಸವ, ಕ್ರೀಡಾ ವಿಭಾಗದಲ್ಲಿ ‘ಅಲೋಸಿಯಡ್’ ಉತ್ಸವ ಹಾಗೂ ಫೆ.4ರಂದು ಮಧ್ಯಾಹ್ನ 12 ಗಂಟೆಗೆ ಉತ್ಸವದ ವಿಶೇಷ ಕಾರ್ಯಕ್ರಮ ‘ಬ್ಯಾಟಲ್ ಆಫ್ ಬ್ಯಾಂಡ್ಸ್’ ನಡೆಯಲಿದೆ. ಸಮಾರೋಪ ಸಮಾರಂಭವು ಅಂದು ಸಂಜೆ 3:30ಕ್ಕೆ ಜರಗಲಿದೆ ಎಂದು ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಂ.ಫಾ.ಡೈನೀಶಿಯಸ್ ವಾಸ್ ರೆಕ್ಟರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಕಚೇರಿಯ ಡಿಜಿಎಂ ವಾಸ್ತಿ ವೆಂಕಟೇಶ್, ಅಭಿವೃದ್ಧಿ ಯೋಜನೆ ಮತ್ತು ಕಾರ್ಪೊರೇಟ್ ವ್ಯವಹಾರ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಆಗಮಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ವಂ.ಫಾ. ಸ್ವೀಬರ್ಟ್ ಡಿಸಿಲ್ವ, ಸಂಯೋಜಕ ಡಾ.ಮುಕುಂದ್ ಪ್ರಭು, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಿಷೆಲ್ ಡಿಸೋಜ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಯೋಜಕ ಡಾ.ಮುಕುಂದ್ ಪ್ರಭು, ಪ್ರವೀಣ್, ಉಪನ್ಯಾಸಕಿ ಜಯಲಕ್ಷ್ಮೀ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಿಷೆಲ್ ಡಿಸೋಜ ಉಪಸ್ಥಿತರಿದ್ದರು.







