ಸಂದೀಪ್ ಮದುವೆಗೆ ಬರಬೇಕೆಂದು ಆಹ್ವಾನ ನೀಡಿದ್ದರು: ಮಾಜಿ ಪ್ರಧಾನಿ ದೇವೇಗೌಡ

ಹೊಸದಿಲ್ಲಿ, ಜ.31: "ಯೋಧ ಸಂದೀಪ್ ಕುಮಾರ್ ಮದುವೆಗೆ ಬರಬೇಕೆಂದು ನನಗೆ ಆಹ್ವಾನ ನೀಡಿದ್ದರು. ಆದರೆ ಮದುವೆಗೆ ಮುನ್ನವೇ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದರು ” ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹುತಾತ್ಮ ಯೋಧ ಸಂದೀಪ್ ಕುಮಾರ್ ಅವರನ್ನು ನೆನೆದು ಕಣ್ಣೀರಿಟ್ಟರು.
ಜಮ್ಮು -ಕಾಶ್ಮೀರದ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾಗಿದ್ದ ಹಾಸನದ ಯೋಧ ಸಂದೀಪ್ ಕುಮಾರ್ ಅವರಿಗೆ ದಿಲ್ಲಿಯಲ್ಲಿ ಇಂದು ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದರು.
"ನನಗೆ ಹಿಂದೆ ದೇವಳದ ಕಾರ್ಯಕ್ರಮವೊಂದರಲ್ಲಿ ಸಂದೀಪ್ ಮಾತನಾಡಲು ಸಿಕ್ಕಿದ್ದರು. ಆಗ ಸಂದೀಪ್ ಮುಂದಿನ ತಿಂಗಳು ನಡೆಯುವ ಅವರ ಮದುವೆಗೆ ಬರುವಂತೆ ಆಹ್ವಾನ ನೀಡಿದ್ದರು ” ಎಂದು ಎಚ್. ಡಿ ದೇವೇ ಗೌಡ ಅವರು ನೆನಪಿಸಿಕೊಂಡರು.
ರಾಜ್ಯ ಸರಕಾರ ಸಂದೀಪ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಕೇಂದ್ರ ಸರಕಾರವೂ ಪರಿಹಾರ ಘೋಷಿಸಲಿ ಎಂದು ದೇವೇ ಗೌಡ ಅವರು ಆಗ್ರಹಿಸಿದರು.
ಯೋಧ ಸಂದೀಪ್ ಸೇರಿದಂತೆ 19 ಮಂದಿ ಯೋಧರ ಪಾರ್ಥಿವ ಶರೀರ ದಿಲ್ಲಿಗೆ ಆಗಮಿಸಿದ್ದು, ದಿಲ್ಲಿಯಲ್ಲಿ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಂತಿಮ ನಮನ ಸಲ್ಲಿಸಿದರು. ಬಳಿಕ ಯೋಧರ ಪಾರ್ಥಿವ ಶರೀರವನ್ನು ಅವರ ಊರುಗಳಿಗೆ ಕಳುಹಿಸಲಾಯಿತು.







