7 ವರ್ಷಗಳಿಂದ ಏಲಂ ಆಗದ ಅಂಗಡಿ ಕೋಣೆ: ಮುಖ್ಯಾಧಿಕಾರಿ ಅಸಮಾಧಾನ
ಕಾಪು ಪುರಸಭೆ ಸಾಮಾನ್ಯ ಸಭೆ
ಕಾಪು , ಜ.31 : ಪುರಸಭಾ ವ್ಯಾಪ್ತಿಯಲ್ಲಿ ಸದಸ್ಯರ ಬೇಡಿಕೆಗನುಗುಣವಾಗಿ ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ಆದಾಯ ಕ್ರೋಢೀಕರಣ ಮುಖ್ಯ. ಆದಾಯ ಹೆಚ್ಚಿಸಲು ಸದಸ್ಯರು ಸಹಕಾರ ನೀಡಬೇಕು ಎಂದು ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಮನವಿ ಮಾಡಿದರು.
ಕಾಪು ಪುರಸಭಾ ಅಧ್ಯಕ್ಷೆ ಸೌಮ್ಯ ಅಧ್ಯಕ್ಷತೆಯಲ್ಲಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪುರಸಭಾ ಸದಸ್ಯರೆಲ್ಲರೂ ಅಂಗಡಿಗಳ ಏಲಂ ಮಾಡಬಾರದು ಎಂದು ಮನವಿ ಮಾಡಿದಾಗ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಪುರಸಭೆಗೆ ಆದಾಯ ಬರುವಲ್ಲಿ ಏಲಂ ಪ್ರಕ್ರಿಯೆಗಳು ನಡೆಯಬೇಕು. ಸದಸ್ಯರು ಅಂಗಡಿಗಳನ್ನು ಅವರಿಗೆ ನೀಡಲು ಒತ್ತಾಯಿಸುವುದು ಸರಿಯಲ್ಲ. ಇದರಿಂದಾಗುವ ತೊಂದರೆಗಳಿಗೆ ಕೌನ್ಸಿಲ್ಲೇ ಹೊಣೆಯಾಗಬೇಕಾಗುತ್ತದೆ. ಈಗಿರುವ ಅಂಗಡಿದಾರರು ಈವರೆಗೆ ಸೇವಾತೆರಿಗೆಯನ್ನೂ ಪಾವತಿಸಿಲ್ಲ . ಕೇಂದ್ರ ಸರಕಾರದ ನಿರ್ದೇಶನದಂತೆ ಫೆ.1 ರಿಂದ ಸೇವಾ ತೆರಿಗೆಯನ್ನು ಶೇ.18ರಂತೆ ಪಾವತಿಸಬೇಕಾಗುತ್ತದೆ. ಈ ಅಂಗಡಿಗಳಿಗೆ ಸದಸ್ಯರ ಒಪ್ಪಿಗೆಯಂತೆ ಶೇ. 50ರಷ್ಟು ಬಾಡಿಗೆ ಹೆಚ್ಚಳ ಮಾಡಿ 2018ಕ್ಕೆ ಏಲಂ ಮಾಡುವ ಕಡ್ಡಾಯ ಸೂಚನೆಯನ್ನು ಮುಖ್ಯಾಧಿಕಾರಿ ನೀಡಿದರು. ಪುರಸಭೆ ಕಾಯ್ದೆ ಪ್ರಕಾರ ಅಂಗಡಿಗಳನ್ನು ಪ್ರತಿ ವರ್ಷ ಏಲಂ ಮಾಡಬೇಕು. 2010ರಿಂದ ಈ ಅಂಗಡಿಗಳು ಏಲಂ ಆಗಿಲ್ಲ. ಕಳೆದ ಬಾರಿ ನಿಯಮ ಮೀರಿ ಏಲಂ ಆಗಿದೆ. ಈ ಬಗ್ಗೆ ಮಾಹಿತಿಗಳು ಬಹಿರಂಗವಾಗಿವೆ ಎಂದರು.
ಪುರಸಭಾ ವ್ಯಾಪ್ತಿಯಲ್ಲಿರುವ ಕೋಳಿ ಮಾರಾಟ ಹಾಗೂ ಆಡು, ಕುರಿ ಮಾಂಸ ಮಾರಾಟದ ಅಂಗಡಿಗಳ ಏಲಂಗೆ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದ ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ರೂ. 15 ಲಕ್ಷ ಹಣ ಮಂಜೂರಾದರೂ ಸಾರ್ವಜನಿಕ ರುದ್ರಭೂಮಿ ನಿರ್ಮಾಣ ಆಗದಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ಪಾದೂರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, 2-3-2015 ರಂದು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ ಅನುದಾನದ ಚೆಕ್ ತಹಶೀಲ್ದಾರ್ ಕಚೇರಿಯಲ್ಲಿಯೇ ಉಳಿದಿತ್ತು. ಪುರಸಭಾ ಆಡಳಿತಾಧಿಕಾರಿ ಅವಧಿಯಲ್ಲಿ ಈ ಬಗ್ಗೆ ಗಮನ ಹರಿಸದೇ ವಿಳಂಬವಾಗಿದೆ. ಇದೀಗ ತಹಶೀಲ್ದಾರ್ ಅವರಲ್ಲಿ ವಿವರ ಪಡೆಯಲಾಗಿದ್ದು, ಶೀಘ್ರದಲ್ಲಿ ನಿರ್ಮಿತಿ ಕೇಂದ್ರಕ್ಕೆ ಚೆಕ್ ತಲುಪಲಿದೆ. ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದರು.
ಶುದ್ಧೀಕರಣ ಘಟಕಕ್ಕೆ ವಿರೋಧ:
ನೂತನ ಪುರಸಭಾ ಕಚೇರಿ ಆವರಣದಲ್ಲಿ ನಿರ್ಮಿಸಲುದ್ದೇಶಿಸಿದ ಕೊಳಚೆ ನೀರಿನ ಶುದ್ಧೀಕರಣ ಘಟಕಕ್ಕೆ ಸಾರ್ವಜನಿಕರ ವಿರೋಧದಿಂದಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದ ಸ್ಥಳದಲ್ಲಿ ಘಟಕ ನಿರ್ಮಾಣ ಮಾಡಲಾಗುವುದು. ಘಟಕದ ಬಗ್ಗೆ ಸಾರ್ವಜನಿಕರಿಗಿರುವ ಸಂದೇಹಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುವುದು ಎಂದು ರಾಯಪ್ಪ ಹೇಳಿದರು.
ರಾಷ್ಟ್ರೀಯ ಹೆದ್ದಾರಿ 66 ರ ವಿಸ್ತರಣೆಯಿಂದ ಮೂಳೂರು, ಉಳಿಯಾರಗೋಳಿ ಹಾಗೂ ಕಾಪು ಪ್ರದೇಶದಲ್ಲಿ ಸರ್ವಿಸ್ ರಸ್ತೆ, ಸಮರ್ಪಕ ವಿದ್ಯುತ್ ದೀಪ ಅಳವಡಿಕೆ, ರಸ್ತೆ ವಿಭಜಕ, ಸಂಪರ್ಕ ರಸ್ತೆಗಳ ಸಮತಟ್ಟು ಮಾಡದೇ ಇರುವುದರಿಂದ ತೊಂದರೆಗಳಾಗುತ್ತಿದೆ ಎಂದು ಸದಸ್ಯರು ದೂರಿದರು. ಈ ಬಗ್ಗೆ ಶಾಸಕ ವಿನಯಕುಮಾರ್ ಸೊರಕೆ ಹೆದ್ದಾರಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಪುರಸಭೆಯಿಂದಲೂ ಪತ್ರ ಬರೆಯುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ:
ಕಾಪು ರಾಷ್ಟ್ರೀಯ ಹೆದ್ದಾರಿ ಬಳಿಯ ಡಂಪಿಂಗ್‌ಯಾರ್ಡ್‌ನಲ್ಲಿರುವ ಮೂರು ಸಾವಿರ ಲೋಡ್ ಕಸದ ತೂಕವನ್ನು ಬಯೋಕಲ್ಚರ್ ಸಿಂಪಡಿಸಿ ಕಡಿಮೆ ಮಾಡಲಾಗುವುದು. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸದಸ್ಯರೆಲ್ಲರೂ ಜಾಗೃತಿ ಮೂಡಿಸಬೇಕು. ಪುರಸಭಾ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಕೆಗೆ ಸೂಕ್ತ ಸ್ಥಳಗಳನ್ನು ಗುರುತಿಸಲಾಗುವುದು. ಬ್ಯಾನರ್ ಅಳವಡಿಕೆಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು.
ರಾಜೀವ್ ಗಾಂಧಿ ವಸತಿ ಯೋಜನೆಯಡಿ ಪುರಸಭಾ ವ್ಯಾಪ್ತಿಯಲ್ಲಿ 119 ಮನೆ ಮಂಜೂರಾಗಿದೆ. ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ಮನೆ ನಿರ್ಮಾಣದ ಬಗ್ಗೆ ಪುರಸಭೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಪುರಸಭಾ ವ್ಯಾಪ್ತಿಯ ರಸ್ತೆ ನಿರ್ಮಾಣದ ಕಾಮಗಾರಿಗಳ ಗುಣಮಟ್ಟವನ್ನು ಎಂಜಿನಿಯರ್‌ಗಳು ದಿನಕ್ಕೆ ಮೂರು ಬಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ಕಾಮಗಾರಿಗೆ ಕಡಿಮೆ ಮೊತ್ತದಲ್ಲಿ ಟೆಂಡರ್ ಪಡೆದುಕೊಂಡರೂ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಾಧಿಕಾರಿ ಎಚ್ಚರಿಸಿದರು.
ಉಪಾಧ್ಯಕ್ಷ ಕೆ. ಎಚ್. ಉಸ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಮೂಳೂರು ಇದ್ದರು.







